ಬೆಂಗಳೂರು, ನ.16- ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ತಮ್ಮ ಮನೆಗೆ ವಿದ್ಯುತ್ ದೀಪಾಲಂಕಾರ ಮಾಡಲು ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಆರೋಪದ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ಬೆಸ್ಕಾಂ ಅಧಿಕಾರಿಗಳು 68 ಸಾವಿರ ದಂಡ ವಿಧಿಸಿದ್ದಾರೆ.
ವಿದ್ಯುತ್ ಕಳ್ಳತನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ಇಂಜಿನಿಯರ್ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಜಾಗೃತದಳ ಎಫ್ ಐ ಆರ್ ದಾಖಲಿಸಿತ್ತು.
ಈ ಕುರಿತು ತನಿಖೆ ನಡೆಸಿದ ಅಧಿಕಾರಿಗಳು ಕುಮಾರಸ್ವಾಮಿ ಅವರ ಮನೆಯನ್ನು ಪರಿಶೀಲಿಸಿದರು. ಆನಂತರ ಕುಮಾರಸ್ವಾಮಿ ಅವರಿಗೆ ಏಳು ದಿನಗಳೊಳಗೆ 68 ಸಾವಿರ ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ಒಂದೆರಡು ದಿನಗಳಲ್ಲಿ ದಂಡ ಪಾವತಿಸುವುದಾಗಿ ಮಾಜಿ ಸಿಎಂ ಭರವಸೆ ನೀಡಿದ್ದಾರೆ.
ಜಯನಗರದಲ್ಲಿರುವ ಬೆಸ್ಕಾಂ ವಿಜಿಲೆನ್ಸ್ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ವಿದ್ಯುತ್ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ವೈರಲ್ ಆಗಿರುವ ವಿಡಿಯೋ ಕ್ಲಿಪ್ ಆಧರಿಸಿ ದೂರು ದಾಖಲಿಸಲಾಗಿದೆ ಎಂದು ಇಂಧನ ಇಲಾಖೆಯ ಹೇಳಿಕೆ ತಿಳಿಸಿದೆ. ತನಗೆ ತಿಳಿಯದಂತೆ ಕಂಬದಿಂದ ವಿದ್ಯುತ್ ಪಡೆಯಲಾಗಿದೆ ಎಂದು ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಮನೆ ಅಲಂಕರಿಸುವ ಕೆಲಸವನ್ನು ಗುತ್ತಿಗೆದಾರನಿಗೆ ನೀಡಲಾಗಿತ್ತು, ಅವರು ತಮ್ಮ ಅಥವಾ ಅವರ ಕುಟುಂಬ ಸದಸ್ಯರಿಗೆ ತಿಳಿಯದೆ ಕಂಬದಿಂದ ವಿದ್ಯುತ್ ಪಡೆದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಅವರ ಗಮನಕ್ಕೆ ತಂದ ತಕ್ಷಣ ವಿದ್ಯುತ್ ಸಂಪರ್ಕವನ್ನು ತೆಗೆದುಹಾಕಲಾಯಿತು. ಈ ಘಟನೆ ನಡೆದಾಗ ತಾವು ನಗರದಲ್ಲಿರಲಿಲ್ಲ ಎಂದು ಹೇಳಿದ್ದಾರೆ.