ಬೆಂಗಳೂರು,ಆ. 29 – ರಾಜ್ಯದ ಚಿಂತಕರು, ಪ್ರಗತಿಪರ ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ ಪ್ರಕರಣಕ್ಕೆ ಸಂಬಂಧ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರಿಗೆ ಒಬ್ಬನೇ ವ್ಯಕ್ತಿ 7 ಮಂದಿಗೆ ಪತ್ರ ಬರೆದು ಕೊಲೆ ಬೆದರಿಕೆ ಹಾಕಿರುವುದು ಪತ್ತೆಯಾಗಿದೆ. ದಾವಣಗೆರೆ ಮೂಲದಿಂದ ಬೆದರಿಕೆ ಪತ್ರ ಬಂದಿರುವುದು ಖಚಿತವಾಗಿದ್ದು, ಒಬ್ಬನೇ ಪತ್ರ ಬರೆದು ಬೇರೆ ಬೇರೆ ಜಿಲ್ಲೆ ತಾಲೂಕುಗಳಿಗೆ ಹೋಗಿ ಪತ್ರಗಳನ್ನು ಪೋಸ್ಟ್ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಆತನ ಪತ್ತೆಗೆ ಸಿಸಿಬಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ರಾಜ್ಯದ ಲೇಖಕರು ಹಾಗೂ ಸಾಹಿತಿಗಳು ಸೇರಿದಂತೆ ಹದಿನೈದಕ್ಕೂ ಹೆಚ್ಚು ಬುದ್ಧಿಜೀವಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ.
ಪ್ರೊ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಬಳಿಕ ಈಗ ಮತ್ತೆ ಕಳೆದೊಂದು ವರ್ಷದಿಂದ ಸಾಹಿತಿ, ಲೇಖಕರಿಗೆ ಜೀವ ಬೆದರಿಕೆ ಬಂದಿರುವುದು ಬುದ್ಧಿಜೀವಿಗಳು ಆತಂಕಗೊಂಡಿದ್ದಾರೆ. ಕೋಮುವಾದ, ಜಾತಿವಾದ, ಮೌಡ್ಯವಿರೋಧಿ ನಿಲುವುಳ್ಳ ಸಾಹಿತಿಗಳು ಹಾಗೂ ಬುದ್ಧಿಜೀವಿಗಳಿಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ.
ಇದರಿಂದ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಮಾನಸಿಕ ಹಿಂಸೆಗೊಳಗಾಗಿದ್ದು, ಯಾವ ಸಂದರ್ಭದಲ್ಲಾದರೂ ತಮ್ಮ ಮೇಲೆ ದಾಳಿಯಾಗಬಹುದು ಎನ್ನುವ ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಹಿತಿ, ಲೇಖಕರು ತಮಗೆ ರಕ್ಷಣೆ ನೀಡಬೇಕೆಂದು ಸರ್ಕಾರದ ಮೊರೆ ಹೋಗಿದ್ದರು.
ಕೆ. ಮರುಳಸಿದ್ದಪ್ಪ ನೇತೃತ್ವದಲ್ಲಿ ಪರಮೇಶ್ವರ ಅವರನ್ನು ಮೊನ್ನೇಯಷ್ಟೇ ಭೇಟಿ ಮಾಡಿದ್ದ ಸಾಹಿತಿಗಳು, ನಿರಂತರವಾಗಿ ಬೆದರಿಕೆ ಕರೆಗಳು ಮತ್ತು ಪತ್ರಗಳು ಬರುತ್ತಿರುವ ಕುರಿತು ಮಾಹಿತಿ ನೀಡಿದ್ದರು. ಈ ಕುರಿತು ಗೃಹ ಸಚಿವರು ವಿವರವಾಗಿ ಮಾಹಿತಿ ಪಡೆದುಕೊಂಡು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು.