ಬೆಂಗಳೂರು- ಕಾಂಗ್ರೆಸ್ ಆರಂಭಿಸಿರುವ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಅಭಿಯಾನ ಮತ್ತು ಪ್ರತಿಭಟನೆಯಿಂದ ಬೆಚ್ಚಿದ ರಾಜ್ಯ ಸರ್ಕಾರ ಇದೀಗ ಮೇಲ್ಸೇತುವೆ ವಿಸ್ತರಣೆ ಯೋಜನೆ ಕಾಮಗಾರಿಗೆ ಚಾಲನೆ ನೀಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಯೋಜನೆಯ ಮೊದಲ ಹಂತದಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆಯಿಂದ ಬೆಂಗಳೂರು ಕಡೆಗೆ ಮೂರು ಪಥದ ಮೇಲ್ಸೇತುವೆ ಮತ್ತು ಯಶವಂತಪುರ-ಕೆ.ಆರ್. ಪುರ ಮಾರ್ಗದಲ್ಲಿ ಮೂರು ಪಥದ ಅಂಡರ್ ಪಾಸ್ ನಿರ್ಮಿಸಲಾಗುತ್ತಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಈ ಯೋಜನೆ ಸಿದ್ದಗೊಂಡಿತ್ತು. ಇದರಲ್ಲಿ ಒಂದು ಹಂತದ ಕಾಮಗಾರಿ ಮಾತ್ರ ಪೂರ್ಣಗೊಂಡಿತ್ತು.ಉಳಿದ ಕಾಮಗಾರಿ ನಾನಾ ಕಾರಣದಿಂದ ನೆನೆಗುದಿಗೆ ಬಿದ್ದಿತ್ತು.
ಕೋವಿಡ್ ನಂತರ ಜನ ಜೀವನ ಯಥಾಸ್ಥಿತಿಗೆ ಮರಳಿದ್ದು,ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತೊಂದು ಟರ್ಮಿನಲ್ ಸೇವೆ ಆರಂಭಿಸುತ್ತಿದ್ದಂತೆ ಈ ರಸ್ತೆಯಲ್ಲಿ ವಾಹನ ದಟ್ಟಣೆ ಅತಿಯಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ,ಮಾಜಿ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಆನಂತರ ಆಂದೋಲನ ಆರಂಭಿಸಿದ್ದರು.ಇದಕ್ಕೆ ಸಾಕಷ್ಟು ಜನ ಬೆಂಬಲ ಕೂಡಾ ವ್ಯಕ್ತವಾಗಿತ್ತು.ಇದರ ನಡುವೆ ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲೂ ವಿಷಯ ಪ್ರಸ್ತಾಪಿಸಿದ ಕೃಷ್ಣ ಬೈರೇಗೌಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ಎಲ್ಲಾ ಹೋರಾಟದಿಂದ ಬೆಚ್ಚಿದ ಸರ್ಕಾರ ಇದೀಗ ತರಾತುರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿದೆ.ಬಿಡಿಎ ಕಾಮಗಾರಿಗೆ ಚಾಲನೆ ನೀಡಿದೆ. ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆಗೆ ಒಟ್ಟು 225 ಕೋಟಿ ರೂಪಾಯಿಯ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಹಣವನ್ನೂ ಮಂಜೂರು ಮಾಡಲಾಗಿದೆ. ಈಗ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ 87 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.
Previous Articleದೆಹಲಿಗೆ ಹತ್ತಿರದ ಪ್ರದೇಶದಲ್ಲಿ ಭೂಕಂಪ
Next Article ಅರವಿಂದ ಲಿಂಬಾವಳಿ ವಿರುದ್ಧ FIR