ಬೆಂಗಳೂರು – ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಅತ್ಯಧಿಕ ಸ್ಥಾನ ಗೆಲ್ಲಲು ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಪ್ರಚಾರದ ವೇಳೆ ನಕಾರಾತ್ಮಕ ಧೋರಣೆಯನ್ನು ಬದಿಗೊತ್ತಿ ಸಕಾರಾತ್ಮಕ ಅಂಶಗಳ ಮೂಲಕ ಮತದಾರರ ಮನ ಗೆಲ್ಲಬೇಕು ಎಂದು ನಾಯಕರಿಗೆ ತಾಕೀತು ಮಾಡಿದೆ.
ಚುನಾವಣೆ ಪ್ರಚಾರದ ವೇಳೆ ಯಾವುದು ನಾಯಕರು ಪ್ರತಿಪಕ್ಷಗಳ ಮುಖಂಡರ ಮೇಲೆ ವ್ಯಯಕ್ತಿಕ ಆರೋಪಗಳನ್ನು ಮಾಡಬಾರದು ಮಾತನಾಡುವ ಸಮಯದಲ್ಲಿ ಸಂಪೂರ್ಣ ಸಂಯಮದಿಂದ ಮಾತನಾಡಬೇಕು ಪ್ರಚೋದನಕಾರಿಯಾದ ಹೇಳಿಕೆಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದು ಕಟ್ಟಪ್ಪಣೆ ವಿಧಿಸಿದೆ.
ಅದರಲ್ಲೂ ಪ್ರಧಾನಿ ಮೋದಿ ಅವರ ಬಗ್ಗೆ ಟೀಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು ಯಾವುದೇ ಕಾರಣಕ್ಕೂ ಪ್ರಚೋದನಕಾರಿಯಾದ ಹಾಗೂ ವೈಯಕ್ತಿಕ ಹೇಳಿಕೆಗಳನ್ನು ನೀಡಬಾರದು ಎಂದು ಸೂಚಿಸಿದ್ದು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಎಲ್ಲ ಪ್ರದೇಶ ಕಾಂಗ್ರೆಸ್ ಘಟಕಗಳಿಗೆ ಸಂದೇಶ ರವಾನಿಸಿದೆ.
ಕಳೆದ ಮೂರು ಲೋಕಸಭಾ ಚುನಾವಣೆಯ ಸಮಯದಲ್ಲಿ ಮಾಡಲಾದ ಸಾವಿನ ಮನೆಯ ಸರದಾರ, ಚಹಾ ಮಾರುವವ, ಮತ್ತು ಚೋರ್ ಎಂಬ ಶಬ್ದಗಳು ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ದುಬಾರಿಯಾದವು ಅದನ್ನು ಪ್ರಧಾನಿ ಮೋದಿ ಯಶಸ್ವಿಯಾಗಿ ಪ್ರಸ್ತಾಪಿಸುವ ಮೂಲಕ ತಮ್ಮ ಪರವಾಗಿ ಅನುಕಂಪದ ಅಲೆ ಏಳುವಂತೆ ನೋಡಿಕೊಂಡರು. ಈ ಬಾರಿಯೂ ಅಂತಹುದೇ ಪ್ರಯತ್ನಗಳನ್ನು ಮಾಡಲು ಬಿಜೆಪಿ ಚಿಂತಕರ ಚಾವಡಿ ಸದಾ ಎಚ್ಚರಿಕೆಯಿಂದ ಗಮನಿಸುತ್ತಿದೆ ಹೀಗಾಗಿ ನಾವುಗಳು ಸಾಕಷ್ಟು ಜಾಗ್ರತೆ ವಹಿಸಬೇಕು ಎಂದು ಹೈಕಮಾಂಡ್ ಎಲ್ಲ ರಾಜ್ಯ ಘಟಕಗಳಿಗೆ ಸೂಚನೆ ನೀಡಿದೆ.
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ ಕಂಗನಾ ರಣಾವತ್ ಬಗ್ಗೆ ಮಹಿಳಾ ಕಾಂಗ್ರೆಸ್ ನಾಯಕಿ ಮಾಡಿರುವ ಉಲ್ಲೇಖ ಹಾಗೂ ಕರ್ನಾಟಕದ ಸಚಿವ ಶಿವರಾಜ್ ತಂಗಡಗಿ ಅವರು ಪ್ರಧಾನಿ ಮೋದಿ ಅವರ ಕುರಿತು ನೀಡಲಾಗಿರುವ ಹೇಳಿಕೆಯ ಬಗ್ಗೆ ಹೈಕಮಾಂಡ್ ವಿಶೇಷವಾಗಿ ಪ್ರಸ್ತಾಪಿಸಿದ್ದು ಇನ್ನು ಮುಂದೆ ಇಂತಹುದು ನಡೆಯಲೇ ಬಾರದು ಎಂದು ಹೇಳಿದೆ.
ಇತ್ತೀಚೆಗೆ ನಡೆದ ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಯಾವುದೇ ವೈಯಕ್ತಿಕ ಟೀಕೆಗಳನ್ನು ಮಾಡದೆ ಕೇವಲ ಸಕಾರಾತ್ಮಕ ವಿಷಯಗಳನ್ನು ಇಟ್ಟುಕೊಂಡು ಕಾಂಗ್ರೆಸ್ಸಿನ ಗ್ಯಾರಂಟಿಗಳ ಬಗ್ಗೆ ಹೆಚ್ಚು ಹೆಚ್ಚು ಮಾತನಾಡುತ್ತಾ ಸಾಗಿದ್ದರಿಂದ ಪಕ್ಷಕ್ಕೆ ಸಾಕಷ್ಟು ಅನುಕೂಲವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಿದೆ ಇದೆ ಮಾನದಂಡವನ್ನು ಲೋಕಸಭೆ ಚುನಾವಣೆ ಮುಗಿಯುವವರೆಗೆ ಅನುಸರಿಸಬೇಕು ಎಂದು ಸಲಹೆ ಮಾಡಿದೆ.
ಚುನಾವಣೆಯಲ್ಲಿ ಮತದಾರರ ಮನ ಗೆಲ್ಲಲು ಕಾಂಗ್ರೆಸ್ ಹಲವಾರು ಗ್ಯಾರಂಟಿಗಳನ್ನು ಘೋಷಿಸಿದೆ ಇವುಗಳ ಬಗ್ಗೆ ಸತತ ಪ್ರಚಾರ ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸಿ ಅವುಗಳನ್ನು ಮತಗಳಾಗಿ ಪರಿವರ್ತಿಸಬೇಕು ಎಂದು ಸೂಚನೆ ನೀಡಿದೆ.

