ಬೆಂಗಳೂರು, ಏ.15: ಲೋಕಸಭೆ Electionಯ ಕಾವು ದೇಶಾದ್ಯಂತ ಬಿಸಿಲಿನ ತೀವ್ರತೆಗಿಂತಲೂ ಹೆಚ್ಚಾಗಿದೆ. ಎಲ್ಲಿ ನೋಡಿದರೂ ಚುನಾವಣೆಯದ್ದೇ ಮಾತು.ಸೋಲು ಗೆಲುವಿನದ್ದೆ ಲೆಕ್ಕಾಚಾರ.
ಪ್ರಚಾರದ ವೈಖರಿ, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಕಾರ್ಯತಂತ್ರ,ಅಭ್ಯರ್ಥಿಗಳ ಖರ್ಚು ವೆಚ್ಚ, ಸಾಮಾಜಿಕ ಜಾಲತಾಣಗಳ ಪ್ರಭಾವ ಸೇರಿದಂತೆ ಹಲವಾರು ವಿಷಯಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿವೆ.
ಇದು ಈಗ ನಡೆಯುತ್ತಿರುವ ಚುನಾವಣೆಯ ಕಥೆಯಾದರೆ ಸ್ವಾತಂತ್ರ್ಯದ ನಂತರ ದೇಶದಲ್ಲಿ ನಡೆದ ಮೊದಲ ಎರಡು ಚುನಾವಣೆ ಹೇಗಿತ್ತು ಎಂಬ ಕುತೂಹಲ ಇದೆಯಲ್ಲವೇ..ಅಂದು ನಡೆದ ಚುನಾವಣೆಯಅತ್ಯಂತ ವಿಶೇಷವೆಂದರೆ ಚುನಾವಣಾ ಪ್ರಕ್ರಿಯೆಗಳು ಹೆಚ್ಚು ದಿನ ನಡೆದಿದ್ದರೆ, ಅದಕ್ಕಿಂತ ಮುಖ್ಯವಾಗಿ ಪೇಪರ್ ಬ್ಯಾಲೆಟ್ ಆಧರಿಸಿ ಮತ ಪೆಟ್ಟಿಗೆಗಳನ್ನು ಬಳಸಿ ಮಾಡಲಾದ ಚುನಾವಣೆ ಹಲವು ಕಾರಣಗಳಿಂದ ಗಮನ ಸೆಳೆಯುತ್ತದೆ ಈ ಚುನಾವಣೆಯಲ್ಲಿ ಅಭ್ಯರ್ಥಿವಾರು ಮತ ಪೆಟ್ಟಿಗೆಗಳ ಬಳಕೆ ಮಾಡುತ್ತ ಇದ್ದದ್ದು ಕುತೂಹಲದ ಸಂಗತಿ.
ಮತಪತ್ರವನ್ನು ಬಳಕೆ ಮಾಡಿ ಚುನಾವಣೆ ನಡೆಸುವ ಪದ್ಧತಿಯನ್ನು ಜಾರಿಗೆ ತರಲಾಯಿತು. ಆದರೆ ಎರಡು ಚುನಾವಣೆಯಲ್ಲಿ ಪ್ರತ್ಯೇಕ ಬಾಲೆಟ್ ಬಾಕ್ಸ್‌ಗಳನ್ನು ಇಡಲಾಗುತ್ತಿತ್ತು. ಮತದಾರರು ಯಾವ ಅಭ್ಯರ್ಥಿಗೆ ಮತ ಹಾಕುತ್ತಾರೋ ಅದನ್ನು ಆ ಅಭ್ಯರ್ಥಿ ಹೆಸರಿನ ಪೆಟ್ಟಿಗೆಗೆ ಹಾಕಬೇಕಾಗಿತ್ತು. ಬಾಕ್ಸ್ ಗಳ ಮೇಲೆ ಅಭ್ಯರ್ಥಿಯ ಹೆಸರು, ಚಿಹ್ನೆ ಇರುತ್ತಿತ್ತು, ಪ್ರತಿ ಬಾಕ್ಸ್‌ನ ಬಣ್ಣ ಸಹ ಪ್ರತ್ಯೇಕ ಇರುತ್ತಿತ್ತು.
ಇದರಿಂದಾಗಿ ಚುನಾವಣೆಯ ಪ್ರಮುಖ ವಿಷಯವಾದ ಗೌಪ್ಯತೆಗೆ ಧಕ್ಕೆ ಉಂಟಾಗುತ್ತದೆ ಎಂಬ ಆರೋಪ ಕೇಳಿಬಂದಿತು.ಈ ಪದ್ಧತಿ ಸರಿಯಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದ ಚುನಾವಣಾ ಆಯೋಗ ಮೂರನೇ ಅಂದರೆ 1962 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತಪತ್ರಗಳನ್ನು ಒಂದೇ ಬಾಲೆಟ್ ಬಾಕ್ಸ್‌ನಲ್ಲಿ ಹಾಕುವ ಪದ್ದತಿಯನ್ನು ಜಾರಿಗೆ ತಂದಿತು.
ಸ್ಟೀಲ್ ಬಳಕೆ :
ಮೊದಲ ಚುನಾವಣೆಯಲ್ಲಿ ದೇಶದಲ್ಲಿ ಇದ್ದ 2.24 ಲಕ್ಷ ಮತಗಟ್ಟೆಗಳಿಗೆ 2 ಮಿಲಿಯನ್ ಸ್ಟೀಲ್ ಬಾಕ್ ಗಳನ್ನು ಬಳಕೆ ಮಾಡಲಾಗಿತ್ತು. ಅವುಗಳನ್ನು ತಯಾರಿಸಲು 8,200 ಟನ್ ಸ್ಟೀಲ್ ಬಳಕೆ ಮಾಡಲಾಗಿತ್ತು.
ಪ್ರಚಾರ:
ಚುನಾವಣೆಯ ಬಗ್ಗೆ ಜನರಿಗೆ ಮಾಹಿತಿಯನ್ನು ಸಿನಿಮಾ ಮಂದಿರದಲ್ಲಿ ಜಾಹೀರಾತಿನ ಮೂಲಕ ನೀಡಲಾಗಿತ್ತು. ದೇಶದಲ್ಲಿದ್ದ 70 ಸಾವಿರ ಸಿನಿಮಾ ಮಂದಿರಗಳಲ್ಲಿ ಚುನಾವಣೆಯ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗಿತ್ತು.
ಮತದಾರರ ಪಟ್ಟಿ ತಯಾರಿ:
ದೇಶದ ಮತದಾರರ ಪಟ್ಟಿ ತಯಾರಿಸಲು 16,500 ಜನ ಕ್ಲರ್ಕ್‌ಗಳು 6 ತಿಂಗಳ ಕಾಲ ಕೆಲಸ ಮಾಡಿದ್ದರು. ಮೊದಲ ಚುನಾವಣೆಯಲ್ಲಿ ಮತದಾರರ ಪಟ್ಟಿ ಮುದ್ರಣಕ್ಕೆ 3.80 ಲಕ್ಷ ರಿಮ್ಸ್ ಕಾಗದ ಬಳಕೆ ಮಾಡಲಾಗಿತ್ತು.
ಪ್ರತ್ಯೇಕ ಬೂತ್:
ಈಗಿನಂತೆ ಪುರುಷರು ಹಾಗೂ ಮಹಿಳೆಯರಿಗೆ ಒಂದೇ ಬೂತ್ ಮೊದಲ ಚುನಾವಣೆಯಲ್ಲಿ ಇರಲಿಲ್ಲ. ಕೆಲವೆಡೆ ಮಹಿಳೆಯರಿಗಾಗಿಯೇ ದೇಶದಲ್ಲಿ ಪ್ರತ್ಯೇಕವಾಗಿ ಬೂತ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಒಟ್ಟು 27,527 ಮಹಿಳಾ ಬೂತ್‌ಗಳಿದ್ದವು.
ಇವಿಎಂ ಬಳಕೆ:
ಚುನಾವಣಾ ಪದ್ಧತಿಯಲ್ಲಿ ಕಾಲಕಾಲಕ್ಕೆ ಸುಧಾರಣೆಗಳನ್ನು ಮಾಡುತ್ತ ಬಂದ ಆಯೋಗ 1982 ರಲ್ಲಿ ವಿದ್ಯುನ್ಮಾನ ಮತಯಂತ್ರ ತರಲು ಮುಂದಾಯಿತು. ಕೇರಳದಲ್ಲಿ ಉತ್ತರ ಪರವೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಇವಿಎಂ ಬಳಕೆ ಮಾಡಲಾಯಿತು. 1998ರ ಲೋಕಸಭಾ ಚುನಾವಣೆಯಲ್ಲಿ ದೇಶದ ಕೆಲವು ಭಾಗಗಳಲ್ಲಿ ಇವಿಎಂ ಬಳಸಲಾಯಿತು. ರಾಜ್ಯದಲ್ಲಿ ಮೈಸೂರು ಜಿಲ್ಲೆಯಲ್ಲಿ ಬಳಸಲಾಗಿತ್ತು. ಆಗ ರಾಜ್ಯದಲ್ಲಿ ವಿಧಾನಸಭೆ ಹಾಗೂ ಲೋಕಸಭೆಗೆ ಒಟ್ಟಿಗೆ ಚುನಾವಣೆ ನಡೆದಿತ್ತು. 2004ರಿಂದ ಎಲ್ಲೆಡೆ ಇವಿಎಂ ಬಳಸಲಾಗುತ್ತಿದೆ.
ಮೊದಲ ಚುನಾವಣೆ :
ದೇಶದಲ್ಲಿ ಮೊದಲ ಚುನಾವಣೆ ನಡೆದಿದ್ದು ಹಿಮಾಚಲ ಪ್ರದೇಶದ ಚೀನಿ ತಹಸೀಲ್‌ನಲ್ಲಿ. ಹಿಮಾಚಲಪ್ರದೇಶದಲ್ಲಿ ಹಿಮಪಾತ ಹೆಚ್ಚಿರುವ ಕಾರಣಕ್ಕೆ ಅಲ್ಲಿ 1951ರ ಅಕ್ಟೋಬರ್ 25 ರಂದೇ ಚುನಾವಣೆ ನಡೆಸಲಾಗಿತ್ತು. ಇಡೀ ದೇಶದಲ್ಲಿ 1952ರಲ್ಲಿ ಚುನಾವಣೆ ನಡೆಯಿತು. ಮೊದಲ ಚುನಾವಣೆ 68 ಹಂತಗಳಲ್ಲಿ ನಡೆದಿತ್ತು.