ನವದೆಹಲಿ,ಸೆ.16-ಮಹದೇವ್ ಆನ್ಲೈನ್ ಬೆಟ್ಟಿಂಗ್ (Online Betting) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ವಿವಿಧ ರಾಜ್ಯಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ 417 ಕೋಟಿ ರೂ ಮೌಲ್ಯದ ಸಂಪತ್ತನ್ನು ವಶಪಡಿಸಿಕೊಂಡಿದ್ದಾರೆ.
ಕೋಲ್ಕತ್ತಾ, ಭೋಪಾಲ್ ಹಾಗು ಮುಂಬೈ ನಗರಗಳಲ್ಲಿ ಮಹದೇವ್ ಆ್ಯಪ್ನೊಂದಿಗೆ ಸಂಪರ್ಕ ಹೊಂದಿದ್ದ ಅಕ್ರಮ ಹಣ ವರ್ಗಾವಣೆ ಜಾಲದ ವಿರುದ್ಧ ವ್ಯಾಪಕ ಶೋಧ ಕೈಗೊಂಡು ಭಾರಿ ಪ್ರಮಾಣದ ನಗದು, ಆಭರಣ ಮತ್ತಿತರ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಮಹದೇವ್ ಆ್ಯಪ್ ದುಬೈನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಉಳಿದಂತೆ, ಈ ಆ್ಯಪ್ ಶೇ 70-30 ರಷ್ಟು ಲಾಭದ ಅನುಪಾತದಲ್ಲಿ ಸಹವರ್ತಿಗಳಿಗೆ ಫ್ರಾಂಚೈಸಿಂಗ್ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತಿದೆ. ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ನಿರ್ಮಿಸಿದ ಈ ಕಂಪನಿಯು ಹೊಸ ಬಳಕೆದಾರರನ್ನು ಆ್ಯಪ್ಗೆ ಸೇರಿಸಲು ಮತ್ತು ಅನಾಮಧೇಯ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡಲು ಆನ್ಲೈನ್ ಬುಕ್ ಬೆಟ್ಟಿಂಗ್ ಆ್ಯಪ್ ಬಳಸುತ್ತಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಬೆಟ್ಟಿಂಗ್ ಹಣವನ್ನು ವಿದೇಶಿ ಖಾತೆಗಳಿಗೆ ವಾರ್ಗಾಯಿಸಲು ಹವಾಲ ಕಾರ್ಯಾಚರಣೆ ಮಾಡಲಾಗುತ್ತಿತ್ತು ಎಂದು ತಿಳಿಸಿದೆ.
ಈ ಕಂಪನಿಯು ಹೊಸ ಬಳಕೆದಾರರು ಮತ್ತು ಫ್ರಾಂಚೈಸಿಗಾಗಿ ಹುಡುಕುವವರನ್ನು ಆಕರ್ಷಿಸಲೆಂದು ಬೆಟ್ಟಿಂಗ್ ವೆಬ್ಸೈಟ್ಗಳ ಜಾಹೀರಾತುಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಹಣ ವ್ಯಯಿಸುತ್ತಿದೆ ಎಂದು ಇಡಿ ಹೇಳಿದೆ. ಕಂಪನಿಯ ಪ್ರಚಾರಕರು ಛತ್ತೀಸ್ಘಡದ ಭಿಲಾಯ್ ಮೂಲದವರಾಗಿದ್ದಾರೆ. ಮಹದೇವ್ ಬೆಟ್ಟಿಂಗ್ ಆ್ಯಪ್ ದೊಡ್ಡ ಮಟ್ಟದಲ್ಲಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಸಕ್ರಿಯಗೊಳಿಸಲು ಆನ್ಲೈನ್ ವೇದಿಕೆಗಳನ್ನು ಒಟ್ಟುಗೂಡಿಸಿ ಕೆಲಸ ಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
5.87 ಕೋಟಿ ಜಪ್ತಿ:
ಆನ್‌ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್ ನಡೆಸುತ್ತಿದ್ದ ವಿವಿಧ ಕಂಪನಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿನ 5.87 ಕೋಟಿ ರೂ. ಹಣವನ್ನು ಜಾರಿ ನಿರ್ದೇಶನಾಲಯ ಆ.27ರಂದು ಮುಟ್ಟುಗೋಲು ಹಾಕಿಕೊಂಡಿತ್ತು. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಂಪನಿಗಳ ವಿರುದ್ಧ ಬಂದ ದೂರಿನನ್ವಯ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ತಿಂಗಳು ತನಿಖೆ ನಡೆಸಿದ್ದರು.