ಬೆಂಗಳೂರು, ಸೆ.21 – ಕಾಂಗ್ರೆಸ್ ಹೈಕಮಾಂಡ್ (Congress High Command) ಬಯಸಿದರೆ ಅಥವಾ ಮನಸ್ಸು ಮಾಡಿದರೆ ರಾಜ್ಯದಲ್ಲಿ ಮೂರಲ್ಲ,ನಾಲ್ವರು ಬೇಕಾದರೂ ಉಪ ಮುಖ್ಯಮಂತ್ರಿಗಳಾಗಬಹುದು ಎಂದು ಬೃಹತ್ ಕೈಗಾರಿಕೆ ಮಂತ್ರಿ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಮೂವರು ಡಿಸಿಎಂಗಳು ಇರಬೇಕು ಎಂದು ಹೇಳಿರುವ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ಹೈಕಮಾಂಡ್ ಮನಸ್ಸು ಮಾಡಿದರೆ ಮೂವರಷ್ಟೇ ಅಲ್ಲ, ನಾಲ್ವರು ಡಿಸಿಎಂ ಬೇಕಾದರೂ ಮಾಡಬಹುದು ಎಂದು ಹೇಳಿದರು.
ಅನೇಕ ಸಮುದಾಯಗಳಿಗೆ ಇನ್ನೂ ರಾಜಕೀಯ ಅಧಿಕಾರ ನೀಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜಣ್ಣ ಮೂವರು ಉಪ ಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಮಾತನಾಡಿರಬಹುದು. ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಆದರೆ ದುರಾಸೆ ಇರಬಾರದು ಅಷ್ಟೆ ಎಂದರು.
ಪಕ್ಷದ ಬೇಕು-ಬೇಡಗಳ ಬಗ್ಗೆ ತಾವು ಯಾವುದೇ ಕಾರಣಕ್ಕೂ ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ ಬದಲಿಗೆ ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು
ಲೋಕಸಭೆ Electionಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ಸಿಗೆ ಲಾಭವಾಗಲಿದೆ. ಇದರಿಂದ ಜೆಡಿಎಸ್ ನ ನಿಜವಾದ ಬಣ್ಣ ಬಯಲಾಗಿದೆ ಹೀಗಾಗಿ ನಮ್ಮ ಪಕ್ಷವು ಏನಿಲ್ಲವೆಂದರೂ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸ್ಥಿತಿ ಎದುರಾಗಿದ್ದು, ಕೇಂದ್ರ ಸರಕಾರವು ಪರಿಣತರ ತಂಡವನ್ನು ಕಳಿಸಿಕೊಟ್ಟು, ವಾಸ್ತವಾಂಶಗಳ ಪರಿಶೀಲನೆಗೆ ಮುಂದಾಗಬೇಕು.ಪರಿಣತರ ತಂಡ ಖುದ್ದು ಪರಿಶೀಲಿಸಿದ ನಂತರ ತನ್ನ ವರದಿ ನೀಡಿದ ಮೇಲಷ್ಟೆ ಮುಂದಿನ ಹೆಜ್ಜೆ ಏನೆಂದು ಯೋಚಿಸಬಹುದು ಎಂದು ಹೇಳಿದರು.
ಕೇಂದ್ರ ಸಂಪುಟದಲ್ಲಿರುವ ರಾಜ್ಯದ ಪ್ರತಿನಿಧಿಗಳು ಕರ್ನಾಟಕದ ಹಿತ ಕಾಪಾಡಬೇಕು. ಹಿಂದೆ ಅನಂತಕುಮಾರ್ ಪಕ್ಷಾತೀತವಾಗಿ ಕೊಡುತ್ತಿದ್ದ ಸಹಕಾರವನ್ನು ಈಗ ನೆನಪಿಸಿಕೊಳ್ಳಬೇಕು. ಇದರ ಜತೆಯಲ್ಲೇ ಬರಗಾಲದ ವರ್ಷಗಳಲ್ಲಿ ಕಾವೇರಿ ನೀರಿನ ಹಂಚಿಕೆ ಹೇಗಿರಬೇಕು ಎನ್ನುವುದಕ್ಕೆ ಸಂಕಷ್ಟ ಸೂತ್ರವನ್ನು ಕೇಂದ್ರ ಸರಕಾರವು ರೂಪಿಸಬೇಕು ಎಂದು ಅವರು ಪ್ರತಿಪಾದಿಸಿದರು.