ಬೆಂಗಳೂರು, ಏ.5: ದೇಶದ ಗಮನ ಸೆಳೆದಿರುವ ಕರ್ನಾಟಕದ ಲೋಕಸಭೆ ಯ ಈ ಬಾರಿಯ Electionಯಲ್ಲಿ ಕ್ಷೇತ್ರದ ಮತದಾರರಲ್ಲದ ಬೇರೆ ಜಿಲ್ಲೆಯ ವಲಸಿಗರು ಸ್ಪರ್ಧೆ ಮಾಡುತ್ತಿರುವುದು ವಿಶೇಷವಾಗಿದೆ.
ರಾಜ್ಯದ 28 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಮೂರು ಪಕ್ಷದಿಂದ ಹೊರಗಿನವರಿಗೆ ಮನ್ನಣೆ ನೀಡಲಾಗಿದೆ. ಸೋಲು ಗೆಲುವಿನ ಲೆಕ್ಕಾಚಾರ, ಜಾತಿವಾರು ಸಮೀಕರಣ,ನಾಯಕರ ನಡುವಿನ ವೈಮನಸ್ಯ ಸೇರಿದಂತೆ ಹಲವಾರು ಕಾರಣಗಳನ್ನು ಮುಂದೊಡ್ಡಿ ಎಲ್ಲಾ ಪಕ್ಷಗಳು ವಲಸಿಗರಿಗೆ ಮನ್ನಣೆ ನೀಡಿವೆ.
ತಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟಿಲ್ಲದವರು ಅಭ್ಯರ್ಥಿಗಳಾಗಿ ಬಂದಿರುವ ಕುರಿತಂತೆ ಸ್ಥಳೀಯರಲ್ಲಿ ಆಕ್ರೋಶ ಇದ್ದರೂ ರಾಜಕೀಯ ಪಕ್ಷಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲ.
ಈ ಕಾರಣಗಳಿಂದಾಗಿ ಹೊರಗಿನಿಂದ ಬಂದು ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಒಳ ಏಟು ಎಷ್ಟರ ಮಟ್ಟಿಗೆ ಬೀಳಲಿದೆ ಎಂಬುದು ಚುನಾವಣಾ ಕಣವೇ ನಿರ್ಧರಿಸಲಿದೆ.
ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಧಾರವಾಡ ಜಿಲ್ಲೆಯ ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿಯಿಂದ ಬಿಜೆಪಿ ಕಣಕ್ಕೆ ಇಳಿಸಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಶೋಭಾ ಕರಂದ್ಲಾಜೆ ಅವರು ಬೆಂಗಳೂರು ಉತ್ತರದಿಂದ ಸ್ಪರ್ಧಿಸುತ್ತಿದ್ದಾರೆ. ಹಿಂದೆ ಒಮ್ಮೆ ಈ ಕ್ಷೇತ್ರ ವ್ಯಾಪ್ತಿಯ ಯಶವಂತಪುರದಿಂದ ಶಾಸಕಿಯಾಗಿದ್ದರು. ಆ ನಂತರ ರಾಜಾಜಿನಗರದಲ್ಲಿ ಸೋತಿದ್ದರು. ಅವರನ್ನು ಬಿಜೆಪಿ ವರಿಷ್ಠರು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕಳುಹಿಸಿದ್ದರು. ಇದೀಗ ಬೆಂಗಳೂರು ಉತ್ತರಕ್ಕೆ ನೀಡಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರೊ. ಎಂ.ವಿ. . ರಾಜೀವ್‌ಗೌಡ ಅವರು ಸಹ ಕೋಲಾರ ಜಿಲ್ಲೆಗೆ ಸೇರಿದವರು. ಬೆಂಗಳೂರಿನಲ್ಲಿ ಅವರ ಮನೆ ಸಹ ಬೆಂಗಳೂರು ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಸಿ.ಎನ್. ಮಂಜುನಾಥ್ ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಸೇರಿದವರು.
ಮಂಡ್ಯಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿರುವ ಎಚ್.ಡಿ. ಕುಮಾರಸ್ವಾಮಿ ಹಅಸನ ಜಿಲ್ಲೆಯವರು, ರಾಜಕೀಯವಾಗಿ ರಾಮನಗರವನ್ನು ಕಾರ್ಯಕ್ಷೇತ್ರ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಬೆಂಗಳೂರು ನಗರಕ್ಕೆ ಸೇರಿದವರು. ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ತವರು ಅದೇ ಜಿಲ್ಲೆಯೇ. ಆದರೆ ಅವರ ಪತಿ ಶಿವರಾಜಕುಮಾರ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಗೆ ಸೇರಿದವರು. ಆದರೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಹೊರಗಿನವರಿಗೆ ಮಣೆ ಹಾಕಿವೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಬಿ.ಎನ್. ಚಂದ್ರಪ್ಪ ಅವರು ಮೂಡಿಗೆರೆಯವರು. ಅವರು ಒಮ್ಮೆ ಚಿತ್ರದುರ್ಗ ಕ್ಷೇತ್ರದಿಂದ ಸಂಸದರಾಗಿದ್ದಾರೆ, ಒಮ್ಮೆ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ದೂರದ ಬಾಗಲಕೋಟೆ ಜಿಲ್ಲೆಯವರು. ಹಿಂದೆಯೂ ಬೆಂಗಳೂರು ಹೊರವಲಯದ ಆನೇಕಲ್‌ನ ನಾರಾಯಣಸ್ವಾಮಿ ಅವರನ್ನು ಬಿಜೆಪಿ ಈ ಕ್ಷೇತ್ರದಿಂದ ನಿಲ್ಲಿಸಿತ್ತು.
ಚಿಕ್ಕೋಡಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕ ಬೆಳಗಾವಿ ಜಿಲ್ಲೆಯ ಗೋಕಾಕದವರಾದರೂ ಸಹ ಆ ಕ್ಷೇತ್ರ ವ್ಯಾಪ್ತಿಗೆ ಸೇರಿದವರಲ್ಲ.
ಬಾಗಲಕೋಟೆಯ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಶಿವಾನಂದಪಾಟೀಲ್ ಅವರು ವಿಜಯಪುರ ಜಿಲ್ಲೆಗೆ ಸೇರಿದವರು.
ತುಮಕೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿರುವ ವಿ. ಸೋಮಣ್ಣ ಅವರು ಮೂಲತಃ ಕನಕಪುರದವರು. ಆದರೆ ಬೆಂಗಳೂರಿನಲ್ಲಿ ನೆಲೆಸಿ ಇಲ್ಲಿಂದ ಬಿಬಿಎಂಪಿ ಸದಸ್ಯ ಹಾಗೂ ಶಾಸಕರಾಗಿದ್ದಾರೆ. ಕೋಲಾರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ವಿ. ಗೌತಮ್ ಅವರು ಬೆಂಗಳೂರು ನಗರದವರು. ಇಲ್ಲಿಯೇ ಪಕ್ಷದ ಬೆಂಗಳೂರು ಕೇಂದ್ರ ಜಿಲ್ಲೆಯ ಅಧ್ಯಕ್ಷರಾಗಿದ್ದಾರೆ.