ಬೆಂಗಳೂರು:
ಬಿರು ಬೇಸಿಗೆಯಿಂದ ತತ್ತರಿಸುತ್ತಿರುವ ರಾಜ್ಯದ ಜನತೆ ಇದೀಗ ಕೆಪಿಟಿಸಿಎಲ್ ಮತ್ತು ವಿದ್ಯುತ್ ವಿತರಣಾ ಸಂಸ್ಥೆಗಳ ನೌಕರರ ಬಂಡಾಯದ ಬಿಸಿ ಅನುಭವಿಸಲು ಸಜ್ಜಾಗಬೇಕಿದೆ.
ವೇತನ ಪರಿಷ್ಕರಣೆ ಹೆಚ್ಚಿಸುವಂತೆ ಆಗ್ರಹಿಸಿ ಇದೀಗ ಕೆಪಿಟಿಸಿಎಲ್ ಮತ್ತು ಎಲ್ಲ ವಿದ್ಯುತ್ ಕಂಪನಿಗಳ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಇವರು ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಮಾಡಲಿದ್ದಾರೆ.
ಈ ನೌಕರರ ಮುಷ್ಕರದಿಂದಾಗಿ ಅನಿಯಮಿತ ವಿದ್ಯುತ್ ಕಡಿತ ಉಂಟಾಗಲಿದೆ ಇದನ್ನು ಅನುಭವಿಸಲು ರಾಜ್ಯದ ಜನತೆ ಸಿದ್ದರಾಗಬೇಕಿದೆ
ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಪಿಟಿಸಿಎಲ್ ನೌಕರರು ಸಂಘ ಮತ್ತು ಸಂಸ್ಥೆಗಳ ಒಕ್ಕೂಟ ನೀಡಿದ್ದ ಮುಷ್ಕರದ ನೋಟೀಸ್ ನೀಡಿದ್ದರು.
ಈ ನೋಟೀಸ್ ಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಲಿಲ್ಲ. ಈ ಹಿನ್ನಲೆಯಲ್ಲಿ ಅನಿವಾರ್ಯವಾಗಿ ನಿಗದಿಯಂತೆ ಮಾರ್ಚ್ 16 ರಿಂದ ಸಾಮೂಹಿಕವಾಗಿ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆಪಿಟಿಸಿಎಲ್ ನೌಕರರ ಸಂಘ ಮತ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಆರ್. ಹೆಚ್. ಲಕ್ಷ್ಮೀಪತಿ ತಿಳಿಸಿದ್ದಾರೆ.
ವೇತನ ಶ್ರೇಣಿಯನ್ನು ಹೆಚ್ಚಿಸುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಆಡಳಿತ ಮಂಡಳಿಗೆ 14 ದಿನಗಳ ಮುಷ್ಕರ ನೋಟೀಸ್ ಜಾರಿ ಮಾಡಲಾಗಿತ್ತು. ನೋಟೀಸ್ ಜಾರಿ ಮಾಡಿ ಹತ್ತುದಿನಗಳ ಕಳೆದರೂ ಇಲ್ಲಿಯವರೆಗೂ ನಮ್ಮ ಮಂಡಳಿಯಿಂದ ನಮ್ಮ ಬೇಡಿಕೆಗಳಿಗೆ ಪೂರಕವಾದ ಸ್ಪಂದನೆ ದೊರೆತಿಲ್ಲ.
ಆದ್ದರಿಂದ ಅನಿವಾರ್ಯವಾಗಿ ಈಗಾಗಲೇ ನಿಗದಿಯಾಗಿರುವಂತೆ ಮಾರ್ಚ್ 16 ರಿಂದ ಸಾಮೂಹಿಕವಾಗಿ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ತಮ್ಮ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಸಾರ್ವಜನಿಕರಿಗೆ ಆಗುವ ತೊಂದರೆಗೆ ಸರಕಾರವೇ ಹೊಣೆ. ಕೆಲಸಕ್ಕೆ ಗೈರು ಹಾಜರಾಗುತ್ತೇವೆ. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಗಳಿಗೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.