ಅನ್ನಮಯ್ಯ(ಆಂಧ್ರಪ್ರದೇಶ),ಆ.13-ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅತ್ತೆಯೊಬ್ಬಳು ಸೊಸೆಯ ತಲೆ ಕಡಿದು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಭಯಾನಕ ಘಟನೆ ನಡೆದಿರುವುದು ರಾಯಚೋಟಿಯಲ್ಲಿ ಬೆಳಕಿಗೆ ಬಂದಿದೆ.
ಕೌಟುಂಬಿಕ ಕಲಹ ಹಾಗು ಆಸ್ತಿ ವಿವಾದವೇ ಘಟನೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರಾಯಚೋಟಿಯ ಕೆ.ರಾಮಾಪುರಂ ಪ್ರದೇಶದಲ್ಲಿ ವಾಸವಿದ್ದ ವಸುಂಧರಾ ಅವರನ್ನು ಆಕೆಯ ಸ್ವಂತ ಅತ್ತೆಯ ಸಹೋದರಿ ಸುಬ್ಬಮ್ಮ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಸೊಸೆಯನ್ನು ಮನೆಗೆ ಕರೆದ ಅತ್ತೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ಚಾಕು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ವಸುಂಧರಾ ಅವರ ರುಂಡ ಮತ್ತು ಮುಂಡವನ್ನು ಕ್ರೂರವಾಗಿ ಕತ್ತರಿಸಿ ಬೇರ್ಪಡಿಸಿದ್ದಾರೆ. ಬಳಿಕ ವಸುಂಧರಾ ತಲೆ ಹಿಡಿದು ಠಾಣೆಗೆ ತೆರಳಿದ್ದಾರೆ. ಆ ನಂತರ ಪೊಲೀಸರ ಸೂಚನೆ ಮೇರೆಗೆ ಮನೆಗೆ ಮರಳಿ ಅತ್ತೆ ಸುಬ್ಬಮ್ಮ ಶವದ ಬಳಿ ತಲೆ ಇಟ್ಟಿದ್ದಾರೆ.
ಈ ಭೀಕರ ಹತ್ಯೆಯಿಂದ ತಾಯಿ ವಸುಂಧರಾನನ್ನು ಕಳೆದುಕೊಂಡ ಇಬ್ಬರು ಮಕ್ಕಳು ಕಣ್ಣೀರು ಹಾಕಿದ್ದಾರೆ. ಆಸ್ತಿಗಾಗಿ ತಾಯಿಯ ಕೊಲೆ ನಡೆದಿದೆ. ಈಗಾಗಲೇ ತಂದೆಯನ್ನು ಕಳೆದುಕೊಂಡಿದ್ದು, ಈಗ ತಾಯಿಯನ್ನೂ ಕಳೆದುಕೊಂಡು ಅನಾಥರಾಗಿದ್ದೇವೆ ಎಂದು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತು.
ಈಗ ನಮಗೆ ದಿಕ್ಕು ಯಾರೆಂದು ಪ್ರಶ್ನಿಸುತ್ತಿದ್ದ ಆ ಮಕ್ಕಳನ್ನು ಸಾಂತ್ವನ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಡಿಎಸ್ಪಿ ಶ್ರೀಧರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಕೊಲೆ ನಡೆದ ಮನೆಯನ್ನು ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಘಟನೆಯ ಹಿನ್ನೆಲೆ:
ಕಲಕಡ ತಾಲೂಕಿನ ವಸುಂಧರಾ ಅವರನ್ನು ಹದಿನೈದು ವರ್ಷಗಳ ಹಿಂದೆ ರಾಯಚೋಟಿಯ ರಾಜಾ ಎಂಬುವವರೊಂದಿಗೆ ವಿವಾಹವಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ರಾಜಾ ಹತ್ತು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ನಿಧನರಾದರು.ಆ ನಂತರ ಅವರ ಅತ್ತೆಯೂ ತೀರಿಕೊಂಡರು.
ಅಂದಿನಿಂದ ವಸುಂಧರಾ ತನ್ನ ಇಬ್ಬರು ಮಕ್ಕಳು ಹಾಗು ಅತ್ತೆಯ ಸಹೋದರಿ ಸುಬ್ಬಮ್ಮನೊಂದಿಗೆ ವಾಸವಾಗಿದ್ದರು.
ವಸುಂಧರಾ ಅವರ ಮನೆ, ಜಮೀನು ಸೇರಿದಂತೆ ಮತ್ತಿತರ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಸುಬ್ಬಮ್ಮ ಆಗಾಗ್ಗೆ ಅವರೊಂದಿಗೆ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಅಲ್ಲದೇ ವಸುಂಧರಾ ಅವರ ಮೇಲೆ ವಿವಾಹೇತರ ಸಂಬಂಧವಿದೆ ಎಂದು ಸುಬ್ಬಮ್ಮ ಆರೋಪಿಸುತ್ತಿದ್ದರು. ಹೀಗಾಗಿ ವಸುಂಧರಾರನ್ನು ಅತ್ತೆ ಸುಬ್ಬಮ್ಮ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Previous Articleಬಂಧನಕ್ಕೆ ಹೆದರಿ ಜೀವ ಕಳೆದುಕೊಂಡ ಯುವಕ
Next Article ಚಿಕನ್ ಪೀಸ್ ನಲ್ಲಿ ಗಾಂಜಾ ಸಾಗಾಟ..