ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ.
ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ ಉಮೇಂದರ್ ತನ್ನ ಕುಟುಂಬ ಸದಸ್ಯರ ಜತೆ ಚೆನ್ನೈಗೆ ಆಗಮಿಸಿದ್ದರು. ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು.
ವಾರದ ರಜಾ ದಿನ ಕಳೆಯಲು ಮಾಲ್‌ಗೆ ತೆರಳಿದ್ದರು. ಈ ವೇಳೆ ಅವರ ಕುಟುಂಬದ ಏಳು ಸದಸ್ಯರು ಜತೆಗಿದ್ದರು. ಪತ್ನಿ, ಇಬ್ಬರು ಮಕ್ಕಳು ಮತ್ತು ಮೂವರು ಸಂಬಂಧಿಕರು.
ಮಾಲ್‌ನಿಂದ ತೆರಳುವ ವೇಳೆ ಉಮೇಂದರ್ ಪತ್ನಿ ಕ್ಯಾಬ್ ಬುಕ್ ಮಾಡಿದ್ದರು. ಅವರಿದ್ದ ಸ್ಥಳಕ್ಕೆ ಬಂದ ಕ್ಯಾಬ್ ಚಾಲಕ ಒಟ್ಟಿಗೆ ಏಳು ಮಂದಿ ಇರುವುದನ್ನು ನೋಡಿ ಪ್ರಶ್ನೆ ಮಾಡಿದ್ದ. ಕ್ಯಾಬ್ ಬದಲಾಗಿ ಎಸ್ ಯು ವಿ ಬುಕ್ ಮಾಡಬೇಕಿತ್ತು ಎಂದು ವಾದ ಮಂಡಿಸಿದ್ದ.
ಒಟಿಪಿ ನೀಡದೆ ಕಾರಿಗೆ ಹತ್ತಿದ್ದ ಏಳು ಮಂದಿಯನ್ನು ಕೆಳಗಿಳಿಸಿದ್ದ. ಸರಿಯಾದ ಒಟಿಪಿ ನೀಡುವಂತೆ ಹೇಳಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಕ್ಯಾಬ್ ಚಾಲಕ ರವಿ, ಪ್ರಯಾಣಿಕ ಉಮೇಂದರ್ ಅವರ ಹಣೆಗೆ ಮೊಬೈಲ್‌ನಿಂದ ಬಡಿದಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯ ಪರಿಣಾಮ ಉಮೇಂದರ್ ಮೃತಪಟ್ಟಿದ್ದಾರೆ.