ಪುಲ್ವಾಮಾ( ಜಮ್ಮು ಮತ್ತು ಕಾಶ್ಮೀರ),ಆ.10- ಪೊಲೀಸರು ಪುಲ್ವಾಮಾದಲ್ಲಿ ಇಂದು ಸುಮಾರು 25ರಿಂದ 30 ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ವಶಪಡಿಸಿಕೊಂಡು ಭಾರೀ ಪ್ರಮಾಣದ ದುರಂತವನ್ನು ತಪ್ಪಿಸಿದ್ದಾರೆ.
ನಗರದ ಸರ್ಕ್ಯುಲರ್ ರಸ್ತೆಯ ತಹಬ್ ಕ್ರಾಸಿಂಗ್ ಬಳಿ ಐಇಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳಿರುವಾಗ ಐಇಡಿಯನ್ನು ಪತ್ತೆಹಚ್ಚಿರುವುದರಿಂದ ದೊಡ್ಡ ದುರಂತವೊಂದು ತಪ್ಪಿದೆ ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್ ಕುಮಾರ್ ತಿಳಿಸಿದ್ದಾರೆ.
ಪೊಲೀಸರು ಮತ್ತು ಭದ್ರತಾ ಪಡೆಗಳು ಪುಲ್ವಾಮಾದ ಸರ್ಕ್ಯುಲರ್ ರಸ್ತೆಯ ತಹಾಬ್ ಕ್ರಾಸಿಂಗ್ ಬಳಿ ಅಂದಾಜು 25ರಿಂದ 30 ಕೆಜಿ ತೂಕದ ಐಇಡಿಯನ್ನು ವಶಪಡಿಸಿಕೊಂಡಿದ್ದು ಇದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ ಎಂದಿದ್ದಾರೆ.
ಕಳೆದ ಆ.6 ಮುಂಜಾನೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಬಿಹಾರದ ಕಾರ್ಮಿಕರೊಬ್ಬರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು. ಪುಲ್ವಾಮಾದ ಗಡೂರ ಗ್ರಾಮದ ಟೆಂಟ್‌ನಲ್ಲಿ ಕೂಲಿ ಕಾರ್ಮಿಕರ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಈ ಸ್ಫೋಟದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಿದ್ದರು.
ಮೃತ ಕಾರ್ಮಿಕನನ್ನು ಬಿಹಾರದ ಸಕ್ವಾ ಪರ್ಸಾ ನಿವಾಸಿ ಮೊಹಮ್ಮದ್ ಮುಮ್ತಾಜ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮೊಹಮ್ಮದ್ ಆರಿಫ್ ಮತ್ತು ಅವರ ಮಗ ಮೊಹಮ್ಮದ್ ಮಜ್ಬೂಲ್ ಎಂದು ಗುರುತಿಸಲಾಗಿದ್ದು, ಬಿಹಾರದ ರಾಂಪೋರ್ ನಿವಾಸಿಗಳಾಗಿದ್ದಾರೆ. ಈ ಕಾರ್ಮಿಕರು ಹತ್ತಿ ಹಾಸಿಗೆಗಳನ್ನು ತಯಾರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದರು.
Previous Articleಮದುವೆಗೆ ನಿರಾಕರಣೆ ನೊಂದ ಪ್ರೇಮಿಗಳು ನೇಣಿಗೆ
Next Article OTTನಲ್ಲಿ ನೋಡಿ ನಯನತಾರಾ ಮ್ಯಾರೇಜ್!