ಜೈಪುರ(ರಾಜಸ್ಥಾನ),ಆ.25-ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಸೋಗಿನಲ್ಲಿ ಕಾರಿನಲ್ಲಿ ಬಂದ ಐವರು ದರೋಡೆಕೋರರು ಉದ್ಯಮಿಯೊಬ್ಬರ ಮನೆಗೆ ನುಗ್ಗಿ 60 ಲಕ್ಷ ನಗದು, 1.5 ಕೆಜಿ ಚಿನ್ನಾಭರಣಗಳನ್ನು ಲೂಟಿ ಮಾಡಿರುವ ಆತಂಕಕಾರಿ ಘಟನೆ ನಗರದಲ್ಲಿ ನಡೆದಿದೆ. ದುಷ್ಕರ್ಮಿಗಳು ನುಗ್ಗಿದ ಬಳಿಕ ಮನೆಯಲ್ಲಿದ್ದವರಿಗೆ ಶಸ್ತ್ರಾಸ್ತ್ರಗಳನ್ನು ತೋರಿಸಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡು 1 ಗಂಟೆ ಕಾಲ ಇಡೀ ಮನೆಯನ್ನು ಜಾಲಾಡಿ ಹಣ, ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ.
Businessಿಯೊಬ್ಬರ ಮನೆಗೆ ನಿನ್ನೆ ರಾತ್ರಿ ಐವರು ಕಾರಿನಲ್ಲಿ ಆಗಮಿಸಿದ್ದಾರೆ. ತಮ್ಮನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ಮನೆಗೆ ನುಗ್ಗಿದ್ದಾರೆ. ಮುಸುಕುಧಾರಿಗಳಾಗಿದ್ದ ದರೋಡೆಕೋರರು ಬಳಿಕ ಮನೆಯಲ್ಲಿದ್ದ 10 ಮಂದಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ. ಎಲ್ಲರ ಬಾಯಿಗೆ ಬಟ್ಟೆಯನ್ನು ತುರುಕಿ ಟೇಪ್ ಅಂಟಿಸಿ ಕಿರುಚದಂತೆ ಮಾಡಿದ್ದಾರೆ. ಬಳಿಕ ಕೊಲೆ ಬೆದರಿಕೆ ಹಾಕಿ ಬೀರುವಿನ ಕೀ ಕೊಡಲು ಕೇಳಿದ್ದಾರೆ. ಕೀ ಪಡೆದು ಅಲ್ಲಿಯೇ ಇದ್ದ ಬಾಲಕನನ್ನು ಕರೆದೊಯ್ದು ಮನೆಯಲ್ಲಿದ್ದ ಎಲ್ಲ ಕೊಠಡಿಗಳನ್ನು ಜಾಲಾಡಿ ಹಣ, ಚಿನ್ನ, ಬೆಳ್ಳಿಯನ್ನು ದೋಚಿದ್ದಾರೆ.
ಸಿಸಿಟಿವಿ ಕದ್ದೊಯ್ದರು:
60 ಲಕ್ಷಕ್ಕೂ ಅಧಿಕ ನಗದು ಹಾಗು 1.5 ಕೆಜಿ ಚಿನ್ನಾಭರಣವನ್ನು ತುಂಬಿಕೊಂಡ ದುಷ್ಕರ್ಮಿಗಳು ಕೃತ್ಯ ಎಸಗಿದ್ದು ಗೊತ್ತಾಗಬಾರದು ಎಂದು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್‌ಗಳನ್ನೂ ತಮ್ಮೊಂದಿಗೆ ತೆಗೆದುಕೊಂಡು ಪರಾರಿಯಾಗಿದ್ದಾರೆ. ಹೋಗುವ ಮುನ್ನ ಆರೋಪಿಗಳು ಮನೆಯವರ ಕೈಕಾಲುಗಳನ್ನು ಬಿಚ್ಚಿದ್ದಾರೆ.
ದರೋಡೆಕೋರರು ಪರಾರಿಯಾದ ಬಳಿಕ ವ್ಯಾಪಾರಿ ಮನೆಯವರು ಹೊರಗೆ ಓಡಿ ಬಂದು ಸಹಾಯಕ್ಕಾಗಿ ಕಿರುಚಿದ್ದಾರೆ. ನೆರೆಹೊರೆಯವರು ಇದನ್ನು ಕಂಡು ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ದೂರು ನೀಡಲಾಗಿದೆ.
ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ನಗರದ ಎಲ್ಲ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಆದರೆ, ಈವರೆಗೂ ದರೋಡೆಕೋರರ ಸುಳಿವು ಸಿಕ್ಕಿಲ್ಲ. ಸದ್ಯ ಪೊಲೀಸರು ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
Previous Articleಅಧಿಕಾರಿಗಳ ಮೈ ಚಳಿ ಬಿಡಿಸಿದ ಸಾರ್ವಜನಿಕರು
Next Article ಅಕ್ರಮ ಗಣಿ ಕುಣಿಕೆಯಲ್ಲಿ ಜಾರ್ಖಂಡ್ CM