ಶಿಲ್ಲಾಂಗ್( ಮೇಘಾಲಯ),ಜು.25-ರಾಜ್ಯ ಬಿಜೆಪಿ ಉಪಾಧ್ಯಕ್ಷ ಬೆರ್ನಾರ್ಡ್ ಎನ್ ಮರಕ್ ಅವರ ತುರಾದಲ್ಲಿರುವ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿ 6 ಮಂದಿ ಮಕ್ಕಳನ್ನು ರಕ್ಷಿಸಿ 73 ಮಂದಿಯನ್ನು ಬಂಧಿಸಲಾಗಿದೆ.
ಮೇಘಾಲಯದ ಪೊಲೀಸರು ಕೆಲವು ಸುಳಿವಿನ ಆಧಾರದ ಮೇಲೆ ಮರಕ್ ಮಲೀಕತ್ವದ ಬಗಾನ್ ಎಂಬ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದಾರೆ. ಫಾರ್ಮ್‌ಹೌಸ್ ಅನ್ನು ಅಕ್ರಮ ವೇಶ್ಯಾವಾಟಿಕೆಗೆ ಬಳಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಘಟನೆಯಿಂದ ಇದೀಗ ಬಿಜೆಪಿಗೆ ಒಂದು ದೊಡ್ಡ ಕಳಂಕ ತಂದಿದೆ.
ನಾವು 4 ಹುಡುಗರು ಹಾಗು ಇಬ್ಬರು ಹುಡುಗಿಯರು ಸೇರಿದಂತೆ ಒಟ್ಟು 6 ಅಪ್ರಾಪ್ತರನ್ನು ಸ್ಥಳದಿಂದ ರಕ್ಷಿಸಿದ್ದೇವೆ. ಈ ರೆಸಾರ್ಟ್ ಅನ್ನು ವೇಶ್ಯಾವಾಟಿಕೆಯ ಉದ್ದೇಶಕ್ಕೆ ಬಳಸಲಾಗುತ್ತಿದ್ದು, ಅಪ್ರಾಪ್ತರನ್ನು ಕೊಳಕಾದ ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು ಎಂದು ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ್ ಸಿಂಗ್ ತಿಳಿಸಿದ್ದಾರೆ.
ಎಲ್ಲಾ ಅಪ್ರಾಪ್ತರನ್ನು ಸುರಕ್ಷಿತವಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ(ಡಿಸಿಪಿಒ) ಕೈಗೆ ಒಪ್ಪಿಸಿದ್ದೇವೆ. ದಾಳಿಯಲ್ಲಿ 27 ವಾಹನಗಳು, 8 ದ್ವಿಚಕ್ರ ವಾಹನಗಳು, ಸುಮಾರು 400 ಮದ್ಯದ ಬಾಟಲಿಗಳು, 500ಕ್ಕೂ ಹೆಚ್ಚು ಬಳಕೆಯಾಗದ ಕಾಂಡೋಮ್‌ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ವಶಪಡಿಸಿಕೊಂಡಿರುವ ವಸ್ತುಗಳಿಂದಲೇ ಇಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಫಾರ್ಮ್‌ಹೌಸ್‌ನಲ್ಲಿ 30 ಸಣ್ಣ ಕೊಠಡಿಗಳು ಇವೆ. ವೇಶ್ಯಾವಾಟಿಕೆಯಲ್ಲಿ ತೊಡಗಿದ 73 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
Previous ArticleBus ಗಳ ಮುಖಾಮುಖಿ ಡಿಕ್ಕಿ
Next Article ನಾಲ್ವರು ಕಾಲೇಜು ವಿದ್ಯಾರ್ಥಿನಿಯರು ನಾಪತ್ತೆ