ಬೆಂಗಳೂರು,ಜು.31- ಐಸಿಸ್ ಸಂಪರ್ಕದ ಹಿನ್ನಲೆಯಲ್ಲಿ ಕರ್ನಾಟಕ ಸೇರಿ ದೇಶದ ಆರು ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾದಳದ (ಎನ್ಐಎ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಭೂಪಾಲ್, ರಾಯ್ ಸೇನ್, ಗುಜರಾತ್ನ ಬರೂಚ್, ಸೂರತ್, ನವಸಾರಿ, ಅಹ್ಮದಾಬಾದ್, ಬಿಹಾರದ ಅರಾರಿಯ, ಮಹಾರಾಷ್ಟ್ರದ ಕೊಲ್ಲಾಪುರ, ನಾಂದೇಡ್, ಉತ್ತರ ಪ್ರದೇಶದ ದಿಯೋಬಂಡ್ ಹಾಗು ಕರ್ನಾಟಕದ ತುಮಕೂರು, ಭಟ್ಕಳ ಸೇರಿ 6 ರಾಜ್ಯಗಳಲ್ಲಿ ಎನ್‌ಐಎ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿ ವೇಳೆ ಸಾಕಷ್ಟು ದಾಖಲೆಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಐಸಿಸ್ ಸಂಬಂಧಿ ಚಟುವಟಿಕೆಗಳ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ಈ ಬಗ್ಗೆ ಎನ್ಐಎ ಜೂ.25ರಂದು ಸ್ವಯಂ ಪ್ರೇರಿತ ಐಪಿಸಿ 153ಎ, 153ಬಿ ಹಾಗೂ ಯುಎಪಿಎ 18, 18ಬಿ, 38, 39, 40 ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು.ಈ ಸಂಬಂಧ ಇಂದು ದಾಳಿ ನಡೆಸಿ ಶೋಧ ನಡೆಸಲಾಗಿದೆ. ಸದ್ಯ ರಾಜ್ಯದಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಐಸಿಸ್ ಸಂಪರ್ಕದ ಆರೋಪದ ಮೇರೆಗೆ 2021ರಲ್ಲಿ ಭಟ್ಕಳದಲ್ಲಿ ಓರ್ವನನ್ನ ಬಂಧಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ್ದ ಎನ್‌ಐಎ, ಇಂದು ಮಧ್ಯ ಪ್ರದೇಶದ ಎರಡು ಕಡೆ, ಗುಜರಾತ್ ರಾಜ್ಯದ ನಾಲ್ಕು ಕಡೆ, ಮಹಾರಾಷ್ಟ್ರ, ಕರ್ನಾಟಕದಲ್ಲಿ ತಲಾ ಎರಡು ಕಡೆ ಹಾಗು ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ದಾಳಿ ನಡೆಸಿದೆ.
Previous Articleತೆಲುಗು ಸೀರಿಯಲ್ ಸೆಟ್ ನಲ್ಲಿ ಲಕ್ಷ್ಮಿ ಬಾರಮ್ಮ ನಟ ಚಂದನ್ ಗೆ ಕಪಾಳಮೋಕ್ಷ!
Next Article ಉಗ್ರರ ಅಡಗುದಾಣವಾದ ಕರ್ನಾಟಕ..?