ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಸ್ಟಾರ್ ಜೋಡಿ ತಮ್ಮ ಮದುವೆಯ ವಿಡಿಯೋ ಹಕ್ಕನ್ನು ಒಟಿಟಿಗಳ ದೈತ್ಯ ನೆಟ್‌ಫ್ಲಿಕ್ಸ್ ಗೆ ಮಾರಾಟ ಮಾಡಿತ್ತು. ಮದುವೆಯ ಇಡೀ ಖರ್ಚನ್ನು ನೆಟ್‌ಫ್ಲಿಕ್ಸ್ ನೋಡಿಕೊಂಡಿತ್ತು ಎನ್ನಲಾಗಿದೆ. ಮೂಲಗಳ ಪ್ರಕಾರ ನೆಟ್‌ಫ್ಲಿಕ್ಸ್ ನಯನತಾರಾ ಮದುವೆ ವಿಡಿಯೋ ಹಕ್ಕನ್ನು ಬರೋಬ್ಬರಿ 25 ಕೋಟಿ ರೂಪಾಯಿಗೆ ಖರೀದಿ ಮಾಡಿದೆಯಂತೆ. ಇದರ ಸಂಪೂರ್ಣ ಜವಾಬ್ದಾರಿ ನಿರ್ದೇಶಕ ಗೌತಮ್ ಮೆನನ್ ವಹಿಸಿಕೊಂಡಿದ್ದರು. ಆದರೆ ಮದುವೆಯಾಗಿ ಕೆಲವೇ ದಿನಗಳಲ್ಲಿ ನೆಟ್‌ಫ್ಸಿಕ್ಸ್ ಲೇಡಿ ಸೂಪರ್ ಸ್ಟಾರ್ ಮದುವೆ ಸ್ಟ್ರೀಮಿಂಗ್‌ನಿಂದ ಹಿಂದೆ ಸರಿದಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅಲ್ಲದೇ ನಯನತಾರಾ ದಂಪತಿಗೆ ನೆಟ್‌ಫ್ಲಿಕ್ಸ್ ನೋಟಿಸ್ ನೀಡಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. 25 ಕೋಟಿ ರೂಪಾಯಿ ಮದುವೆ ಡೀಲ್ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರೂ ಸಹ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಒಟಿಟಿಯಲ್ಲಿ ಮದುವೆ ಪ್ರಸಾರವಾಗುವುದಿಲ್ಲ, ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೀಗ ಈ ಎಲ್ಲಾ ವದಂತಿ ಮತ್ತು ವಿವಾದಗಳಿಗೂ ಬ್ರೇಕ್ ಹಾಕಿದೆ ನೆಟ್‌ಫ್ಲಿಕ್ಸ್. ಡಾಕ್ಯುಮೆಂಟರಿ ಶೀಘ್ರದಲ್ಲೇ ನೆಟ್‌ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ.
ಹೌದು, ನೆಟ್‌ಫ್ಲಿಕ್ಸ್ ನಲ್ಲಿ ನಯನತಾರಾ: ಬಿಯಾಂಡ್ ದಿ ಫೇರಿಟೇಲ್ ಎಂಬ ಶೀರ್ಷಿಕೆಯಡಿಯಲ್ಲಿ ಡಾಕ್ಯುಮೆಂಟರಿ ರಿಲೀಸ್ ಆಗಲಿದೆ. ಪ್ರಸಿದ್ಧ ನಟರಾದ ರಜನಿಕಾಂತ್, ಶಾರುಖ್ ಖಾನ್, ಸೂರ್ಯ ಮತ್ತು ಇತರ ಅನೇಕ ಸೆಲೆಬ್ರಿಟಿ ಅತಿಥಿಗಳು ಭಾಗವಹಿಸಿದ್ದ ಅದ್ದೂರಿ ವಿವಾಹದ ಡಾಕ್ಯುಮೆಂಟರಿ ರಿಲೀಸ್ ಆಗಲಿದೆ.
ವಿಘ್ನೇಶ್ ಮತ್ತು ನಯನತಾರಾ ಅವರ ಸಾಕ್ಷ್ಯಚಿತ್ರದ ಪ್ರೀಮಿಯರ್ ದಿನಾಂಕವನ್ನು ನೆಟ್‌ಫಿಕ್ಸ್ ಇನ್ನೂ ಘೋಷಣೆ ಮಾಡಿಲ್ಲ, ಅದ್ರೆ ನೆಟ್‌ಫ್ಲಿಕ್ಸ್ ಮದುವೆ ಡಾಕ್ಯುಮೆಂಟರಿ ಕುರಿತು ಪ್ರೋಮೋ ಒಂದನ್ನು ರಿಲೀಸ್ ಮಾಡಿದೆ. ಇನ್ನು, ಮದುವೆಯಾಗಿ ಕೆಲವೇ ದಿನಗಳಲ್ಲಿ ಸಿನಿಮಾ ಶೂಟಿಂಗ್ ಕಾರ್ಯದಲ್ಲಿ ನಟಿ ನಯನಾತಾರ ಬ್ಯೂಸಿಯಾಗಿದ್ದಾರೆ. ಇದೀಗ ಅವರು 75 ನೇ ಸಿನಿಮಾಕ್ಕೆ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಅವರು ತಮ್ಮ ಸಂಪಾದನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.