ಬೆಂಗಳೂರು, ಅ.11- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮಾರ್ಷಲ್ (BBMP Marshal ) ಉದ್ಯೋಗ ಕೊಡಿಸುವುದಾಗಿ 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸಿದ್ದ ಖತರ್ನಾಕ್ ಖದೀಮನನ್ನು ಬಂಧಿಸುವಲ್ಲಿ ಹಲಸೂರುಗೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೆಪಿನಗರದ ಜಂಬೂಸವಾರಿ ದಿಣ್ಣೆಯ ಹರ್ಷ(24)ಬಂಧಿತ ಆರೋಪಿಯಾಗಿದ್ದು, ಆತ ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿ ಪಡೆದಿರುವ 6ಲಕ್ಷ ರೂಪಾಯಿಗೂ ಅಧಿಕ ಹಣದ ಜಪ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಅ.3 ರಂದು ಸಂದೀಪ್.ಎಲ್ ಅವರು ಬಿಬಿಎಂಪಿಯಲ್ಲಿ ಮಾರ್ಷಲ್ ನೌಕರಿಯನ್ನು ಕೊಡಿಸುವುದಾಗಿ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡ ಹಲಸೂರುಗೇಟ್ ಇನ್ಸ್‌ಪೆಕ್ಟರ್ ಹನುಮಂತ ಭಜಂತ್ರಿ ಮತ್ತವರ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು ಕೊರೊನಾ ವೇಳೆ ಬಿಬಿಎಂಪಿ ವಾರ್ ರೂಂ ನಲ್ಲಿ ಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ರು ಆಪರೇಟರ್ ಆಪರೇಟರ್ ಆಗಿ ಕೆಲಸ ಮಾಡಿದ್ದು ಬಳಿಕ ಉದ್ಯೋಗವಿಲ್ಲದೇ ಸುಲಭವಾಗಿ ಹಣಗಳಿಸಲು ವಂಚನೆಯಲ್ಲಿ ತೊಡಗಿದ್ದ ಎಂದರು.
ಆರೋಪಿಯು ಬಿಬಿಎಂಪಿಯಲ್ಲಿ ನೇರ ನೇಮಕಾತಿ ಮೂಲಕ ಮಾರ್ಷಲ್ ನೌಕರಿಗೆ, ನೇಮಕ ಮಾಡಿಕೊಳ್ಳುತ್ತಿದ್ದು 3 ಸಾವಿರ ನೀಡಿದರೆ ನೇಮಕಾತಿ ಮಾಡಿಸುವುದಾಗಿ ನಂಬಿಸಿ, 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ತಲಾ 3 ಸಾವಿರ ಹಣವನ್ನು ಫೋನ್ ಪೇ ಮೂಲಕ ಪಡೆದು
ನಕಲಿ ನೇಮಕಾತಿ ಆದೇಶದ ಪ್ರತಿಗಳನ್ನು ಸೃಷ್ಟಿಸಿ, ಅವುಗಳನ್ನೇ ನೈಜವಾದುವುಗಳೆಂದು ಬಿಂಬಿಸಿ, ವಾಟ್ಸಪ್ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕಳುಹಿಸಿಕೊಟ್ಟಿವುದು ತನಿಖೆಯಲ್ಲಿ ಪತ್ತೆಯಾಗಿದೆ.
ಆರೋಪಿಯಿಂದ ಮಾರ್ಷಲ್ ನೌಕರಿಗೆ ನೇಮಕಾತಿ ಆದಂತ ಇರುವ ಬಿಬಿಎಂಪಿಯ ಹೆಸರಿನಲ್ಲಿರುವ ನೇಮಕಾತಿ ಆದೇಶದ ಪ್ರತಿ, ಆರೋಪಿಯ ಹೆಸರಿನಲ್ಲಿರುವ ಬಿಬಿಎಂಪಿಯ ಗುರುತಿನ ಚೀಟಿ,
ಫೋನ್ ಪೇ ಮೂಲಕ ಹಣವನ್ನು ಪಡೆದಿರುವ ಬಗ್ಗೆ ಸ್ಕ್ರೀನ್ ಶಾಟ್ ಪ್ರತಿಗಳು.
ಆರೋಪಿತನ ಪ್ಯಾನ್ ಕಾರ್ಡ್ ಇನ್ನಿತರ ದಾಖಲೆಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಡಿಸಿಪಿ ಶೇಖರ್, ಹೆಚ್.ಟಿ ಎಸಿಪಿ ಶಿವಾನಂದ ಚಲವಾದಿ ಅವರಿದ್ದರು.