ಬೆಂಗಳೂರು,ಫೆ.11:
ಮಾಹಿತಿ ತಂತ್ರಜ್ಞಾನ ವಲಯದ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಇದೀಗ ಯುವ ಪದವೀಧರರ ಕೆಂಗಣ್ಣಿಗೆ ಗುರಿಯಾಗಿದೆ ಇನ್ಫೋಸಿಸ್ ಸಂಸ್ಥೆಯ ನಿಯಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನೂರಾರು ಮಂದಿ ಯುವ ಜನತೆ ಕೆಲಸ ಕಳೆದುಕೊಂಡು ಹಿಡಿಶಾಪ ಹಾಕುತ್ತಿದ್ದಾರೆ.
ಇನ್ಫೋಸಿಸ್ ಸಂಸ್ಥೆ ಪ್ರತಿ ವರ್ಷ ತನಗೆ ಬೇಕಾಗಿರುವ ಉದ್ಯೋಗಿಗಳಿಗಾಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಕ್ಯಾಂಪಸ್ ಇಂಟರ್ವ್ಯೂ ಮೂಲಕ ನೇಮಕ ಮಾಡಿಕೊಳ್ಳುತ್ತದೆ ಈ ರೀತಿ ನೇಮಕ ಮಾಡಿಕೊಂಡ ಉದ್ಯೋಗಿಗಳಿಗೆ ಸಂಸ್ಥೆ ತರಬೇತಿ ನೀಡಿ ಈ ಅವಧಿಯಲ್ಲಿ ನಿಗದಿಪಡಿಸಿದ ಮೊತ್ತವನ್ನು ಸಂಬಳದ ರೂಪದಲ್ಲಿ ಪಾವತಿಸುತ್ತದೆ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸಂಸ್ಥೆಯಲ್ಲಿ ಕಾಯಂ ಕೆಲಸ ನೀಡಿ ಹೆಚ್ಚಿನ ಸಂಬಳ ಮತ್ತು ಇತರ ಭತ್ಯೆ ಗಳನ್ನು ನೀಡುತ್ತದೆ.
ಆಕರ್ಷಕ ಸಂಬಳ ನೀಡುವ ಈ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಪ್ರತಿಯೊಬ್ಬ ಯುವ ಇಂಜಿನಿಯರ್ ಗಳ ಕನಸಾಗಿರುತ್ತದೆ ಇಂಥ ಕನಸನ್ನು ಬೆನ್ನು ಹತ್ತಿ ಹೋದ ಅನೇಕ ಮಂದಿ ಇದೀಗ ಕೆಲಸದಿಂದ ತೆಗೆಯಲ್ಪಟ್ಟಿದ್ದಾರೆ. ತರಬೇತಿ ಅವಧಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇವರು ಕೆಲಸ ಮಾಡಿಲ್ಲ ಹಾಗೆಯೇ ಸಂಸ್ಥೆ ನೀಡಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂಬ ಸಬೂಬು ನೀಡಿದರೆ ಇನ್ನೂ ಕೆಲವರಿಗೆ ವೇತನದಲ್ಲಿ ತಾರತಮ್ಯ ಮಾಡಿರುವ ಆರೋಪ ಕೇಳಿಬಂದಿದೆ ಈ ಹಿನ್ನೆಲೆಯಲ್ಲಿ ನೂರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ.
ಇನ್ಫೋಸಿಸ್ ಸಂಸ್ಥೆಯು ಇತ್ತೀಚೆಗೆ ಹೊಸ ನೇಮಕಾತಿ ನಿಯಮಗಳನ್ನು ಜಾರಿಗೆ ತಂದಿದೆ. ಅದರ ಪ್ರಕಾರ, ತರಬೇತಿ ಅವಧಿಯನ್ನು ಕಡಿಮೆ ಮಾಡಲಾಗಿದ್ದು, ಪರೀಕ್ಷೆಯ ಕಠಿಣತೆಯನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಅನೇಕ ಉದ್ಯೋಗಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಅಲ್ಲದೆ, ಒಂದೇ ಪರೀಕ್ಷೆಯನ್ನು ಬರೆದರೂ ವೇತನದಲ್ಲಿ ತಾರತಮ್ಯವಿರುವುದು ಕಂಡುಬಂದಿದೆ. ಸಿಸ್ಟಮ್ ಇಂಜಿನಿಯರ್ ಮತ್ತು ಸ್ಪೆಷಲಿಸ್ಟ್ ಪ್ರೋಗ್ರಾಮರ್ ಹುದ್ದೆಗಳಿಗೆ ಒಂದೇ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಇವರ ವೇತನದಲ್ಲಿ ಭಾರಿ ವ್ಯತ್ಯಾಸವಿದೆ. ಸಿಸ್ಟಮ್ ಇಂಜಿನಿಯರ್ ತಿಂಗಳಿಗೆ 20,000 ರೂ. ವೇತನ ಪಡೆಯುತ್ತಿದ್ದರೆ, ಸ್ಪೆಷಲಿಸ್ಟ್ ಪ್ರೋಗ್ರಾಮರ್ 70,000 ರೂ. ವೇತನ ಪಡೆಯುತ್ತಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇನ್ಫೋಸಿಸ್ ಸಂಸ್ಥೆ, “ನಮ್ಮಲ್ಲಿ ಕಠಿಣವಾದ ನೇಮಕಾತಿ ಪ್ರಕ್ರಿಯೆ ಇದೆ. ಎಲ್ಲಾ ಫ್ರೆಶರ್‌ಗಳು ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿ ಪಡೆದ ನಂತರ ಆಂತರಿಕ ಮೌಲ್ಯಮಾಪನಗಳಲ್ಲಿ ತೇರ್ಗಡೆಯಾಗಬೇಕು. ಎಲ್ಲಾ ಅಭ್ಯರ್ಥಿಗಳಿಗೂ ಇಂತಹ ಮೂರು ಅವಕಾಶಗಳು ಲಭ್ಯವಾಗಲಿವೆ ಅದರಲ್ಲಿ ಪಾಸಾದರೆ ಮಾತ್ರ ಕೆಲಸ ಕಾಯಂ ಆಗಲಿದೆ ಇಲ್ಲವಾದರೆ ಅವರಿಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.