ಬೆಂಗಳೂರು,ಮೇ.17-
ಚುಟುಕು ಕ್ರಿಕೆಟ್ ಐಪಿಎಲ್ ಪಂದ್ಯಾವಳಿಗಳು ಕ್ರಿಕೆಟ್ ಪ್ರೇಮಿಗಳಿಗೆ ಹಿಡಿಸಿರುವ ಹುಚ್ಚು ಅಂತಿಂತದ್ದಲ್ಲ.ಈ ಮ್ಯಾಚ್ ಗಳನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಹಾತೊರೆಯುತ್ತಾರೆ.
ಇಂತಹ ಅಭಿಮಾನವನ್ನು ಲಾಭವಾಗಿಸಿಕೊಂಡ ವಂಚಕರು ಕ್ರೀಡಾಭಿಮಾನಿಗಳಿಗೆ ಪಂಗನಾಮ ಹಾಕುತ್ತಿದ್ದಾರೆ.
ಇಂತಹ ವಂಚನೆಯ ಸ್ಟೋರಿ ಇದು.ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ಹಾಗೂ ಆರ್ಸಿಬಿ ಪಂದ್ಯದ ಟಿಕೆಟ್ ಖರೀದಿಸಲು ಹೋದ ನಗರದ ಅಭಿಮಾನಿಯೊಬ್ಬ ಬರೋಬ್ಬರಿ 3 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ಈ ಎರಡೂ ತಂಡಗಳು ಪ್ಲೇ ಆಫ್ ಹಂತಕ್ಕೇರಲು ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯ ಮಹತ್ವದ ಪಂದ್ಯವಾಗಿರುವ ಕಾರಣ ಈ ಪಂದ್ಯದ ಕಾವು ಹೆಚ್ಚಾಗಿದೆ. ಹೀಗಾಗಿ ಈ ಪಂದ್ಯ ನೋಡಲು ಅಭಿಮಾನಿಗಳು ಕಾಳಸಂತೆಯಲ್ಲಿ ದುಬಾರಿ ಬೆಲೆ ಕೊಟ್ಟು ಟಿಕೆಟ್ ಖರೀದಿ ಮಾಡುತ್ತಿದ್ದಾರೆ.
ಇದನ್ನು ಗಮನಿಸಿದ ವಂಚಕ ಪದ್ಮ ಸಿನ್ಹಾ ವಿಜಯ್ ಕುಮಾರ್ ಐಪಿಎಲ್_2024 ಟಿಕೆಟ್ಸ್_24 ಎಂಬ ಖಾತೆಯ ಮೂಲಕ ಪಂದ್ಯಗಳ ಟಿಕೆಟ್ ಬುಕ್ಕಿಂಗ್ ಮಾಡಿಕೊಡಲಾಗುವುದು ಎಂದು ಹೇಳಿ ತನ್ನ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಮಾಹಿತಿ ಎಲ್ಲವನ್ನೂ ಹಂಚಿಕೊಂಡು ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾನೆ.
ಪ್ರತಿ ಟಿಕೆಟ್‌ಗೆ 2,300 ರೂ. ದರದಂತೆ 3 ಟಿಕೆಟ್‌ಗೆ 7,900 ರೂ. ನಿಗದಿ ಪಡಿಸಿದ್ದ. ಈ ಮೂಲಕ ಟಿಕೆಟ್ ಖರೀದಿಸಲು ಬರುವವರ ವಿಶ್ವಾಸ ಸಂಪಾದಿಸಿದ್ದ. ಇದನ್ನು ನಂಬಿದ ಬೆಂಗಳೂರು ಮೂಲದ 28 ವರ್ಷದ ಅಭಿಮಾನಿಯೊಬ್ಬ ಟಿಕೆಟ್ ಖರೀದಿಸಲು ಮುಂದಾಗಿ ತನ್ನ ಖಾತೆಯಲ್ಲಿದ್ದ 3 ಲಕ್ಷ ಕಳೆದುಕೊಂಡಿದ್ದಾನೆ.
ವಿಜಯ್ ಕುಮಾರ್ ಆನ್‌ಲೈನ್ ಪಾವತಿ ಭರವಸೆ ನೀಡಿದ್ದಂತೆ ಈ ಅಭಿಮಾನಿಗೆ 3 ಇ-ಟಿಕೆಟ್‌ಗಳನ್ನು ವರ್ಗಾಯಿಸಿದ್ದಾನೆ. ಆದರೆ, ಹಣ ಪಾವತಿ ನಿಲ್ಲದೆ ಆಗಾಗ ಈ ಅಭಿಮಾನಿಯ ಖಾತೆಯಿಂದ 7,900 ರೂ.ಗಳಂತೆ ಹಣ ವರ್ಗಾವಣೆ ಆಗಿ 3 ಲಕ್ಷ ರೂ,ಗಳಿಗೂ ಅಧಿಕ ಮೊತ್ತ ವಂಚಕನ ಖಾತೆಗೆ ಸೇರಿದೆ. ಈ ವೇಳೆ ಅಭಿಮಾನಿ ವಿಜಯ್ ಕುಮಾರ್‌ಗೆ ಕರೆ ಮಾಡಿ ವಿಚಾರಿಸಿದಾಗ ತಾಂತ್ರಿಕ ದೋಷ ಕಾರಣ ಹೀಗಾಗಿದ್ದು, ಹಣವನ್ನು ಹಿಂದಿರುಗಿಸುವುದಾಗಿ ಹೇಳಿಕೊಂಡಿದ್ದಾನೆ.
ಆ ಬಳಿಕವೂ ಕೂಡ ಹಣ ವರ್ಗಾವಣೆ ನಡೆದ ಕಾರಣ ಅನುಮಾನಗೊಂಡ ಅಭಿಮಾನಿ ಪೊಲೀಸರಿಗೆ ದೂರು ನೀಡಿದ್ದಾನೆ. ಹಣ ಪಾವತಿಯನ್ನು ತಡೆಯುವ ಹೊತ್ತಿಗಾಗಲೇ 3 ಲಕ್ಷ ರೂ. ಗಳಿಗೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದು, ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.