ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗೀಲ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ ಇವರ ವಿರುದ್ಧ ಸಲ್ಲಿಕೆಯಾಗಿದ್ದ ಮಾನನಷ್ಟ ಮೊಕದ್ದಮೆ ಹೈಕೋರ್ಟ್ ನಲ್ಲಿ ವಜಾಗೊಂಡಿದೆ. ಇವರ ವಿರುದ್ದ ನಿವೃತ್ತ ಡಿಜಿಪಿ ಎಚ್. ಎನ್. ಸತ್ಯನಾರಾಯಣ ರಾವ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಣೆ ರದ್ದು ಕೋರಿ ಡಿ. ರೂಪಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ. ಅರ್ಜಿದಾರರ ಪರ ವಾದಿಸಿದ ವಕೀಲ ಮಧುಕರ್ ದೇಶಪಾಂಡೆ, ‘ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 199 ಪ್ರಕಾರ, ಸರಕಾರಿ ಸಿಬ್ಬಂದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾದರೆ ವಿಶೇಷ ನಿಯಮ ಅನುಸರಿಸಬೇಕು. ಸರಕಾರಿ ಅಭಿಯೋಜಕರ ಮೂಲಕವೇ ಸೆಷನ್ಸ್ ನ್ಯಾಯಾಲಯಕ್ಕೆ ಮಾನನಷ್ಟ ಮೊಕದ್ದಮೆ ದಾಖಲಿಸಬೇಕು. ಮಾನಹಾನಿ ವರದಿ ಪ್ರಕಟಗೊಂಡ 6 ತಿಂಗಳೊಳಗೆ ಮೊಕದ್ದಮೆ ದಾಖಲಿಸಬೇಕು. ಆದರೆ, ಸತ್ಯ ನಾರಾಯಣ ಮಾನನಷ್ಟ ಮೊಕದ್ದಮೆ ದಾಖಲಿಸುವಾಗ ಈ ನಿಯಮ ಪಾಲಿಸಿಲ್ಲ’ ಸಾರ್ವಜನಿಕ ಸಿಬ್ಬಂದಿಯೊಬ್ಬರು ಮತ್ತೊಬ್ಬ ಸರಕಾರಿ ಸಿಬ್ಬಂದಿಯೊಬ್ಬರ ವಿರುದ್ಧ ಸರಕಾರಕ್ಕೆ ವರದಿ ಸಲ್ಲಿಸುವುದು ಮಾನನಷ್ಟ ಪ್ರಕರಣದ ವ್ಯಾಪ್ತಿಗೆ ಬರುವುದಿಲ್ಲ. ತಮ್ಮ ಅಧಿಕೃತ ಕರ್ತವ್ಯದ ನಿರ್ವಹಣೆ ಭಾಗವಾಗಿರುತ್ತದೆ. ಆದರೂ, ಸತ್ಯನಾರಾಯಣ ರಾವ್ ದಾಖಲಿಸಿದ ದೂರು ಪರಿಗಣಿಸಿ ಡಿ. ರೂಪಾ ವಿರುದ್ಧ ಮ್ಯಾಜಿಸ್ಪ್ರೇಟ್ ನ್ಯಾಯಾಲಯ ತನಿಖೆಗೆ ಆದೇಶಿಸಿರುವುದು ಸರಿಯಲ್ಲ.ಎಂದು ವಾದ ಮಂಡಿಸಿದರು. ಈ ವಾದ ಮಾನ್ಯ ಮಾಡಿದ ಹೈಕೋರ್ಟ್ ರೂಪಾ ಅವರ ಮನವಿ ಪುರಸ್ಕರಿಸಿ ಮಾನನಷ್ಟ ಮೊಕದ್ದಮೆ ವಜಾಗೊಳಿಸಿತು.ಕಳೆದ 2017ರ ಜುಲೈ 12ರಂದು ರಾಜ್ಯ ಕಾರಾಗೃಹಗಳ ಇಲಾಖೆ ಡಿಜಿಐ ಆಗಿದ್ದ ಡಿ. ರೂಪಾ ಸರಕಾರಕ್ಕೆ ವರದಿ ಸಲ್ಲಿಸಿ, ಕಾರಾಗೃಹ ಇಲಾಖೆ ಡಿಜಿಪಿಯಾಗಿದ್ದ ಎಚ್. ಎನ್. ಸತ್ಯನಾರಾಯಣ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತರಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾಗೆ ವಿಶೇಷ ಸೌಲಭ್ಯ ಕಲ್ಪಿಸಲು ಸತ್ಯನಾರಾಯಣ ರಾವ್ ಎರಡು ಕೋಟಿ ರೂ. ಲಂಚ ಪಡೆದಿದ್ದಾರೆಂದು ವರದಿಯಲ್ಲಿ ಆರೋಪಿಸಲಾಗಿತ್ತು. ಈ ಕುರಿತ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾಗಿದ್ದವು.2017ರ ಜುಲೈ 31ರಂದು ಸೇವೆಯಿಂದ ನಿವೃತ್ತರಾಗಿದ್ದ ಸತ್ಯನಾರಾಯಣ ರಾವ್, ‘ಡಿ. ರೂಪಾ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಇದರಿಂದ ತಮ್ಮ ಘನತೆಗೆ ಧಕ್ಕೆಯಾಗಿದೆ’ ಎಂದು ಆರೋಪಿಸಿ 2018ರ ಫೆಬ್ರುವರಿ 5 ರಂದು ಬೆಂಗಳೂರು ನಗರದ 9ನೇ ಎಸಿಎಂಎಂ ನ್ಯಾಯಾಲಯಕ್ಕೆ 20 ಕೋಟಿ ರೂ. ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ReplyForward |