ಬೆಂಗಳೂರು – ಅಕ್ಟೋಬರ್, 29:
‘ಪವರ್ ಸ್ಟಾರ್, ಯುವರತ್ನ, ನಗುಮೊಗದ ಒಡೆಯ, ಚಂದನವನದ ರಾಜಕುಮಾರ, ಎಲ್ಲರ ಪ್ರೀತಿಯ ಅಪ್ಪು’ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಪುನೀತ್ ರಾಜ್ ಕುಮಾರ್ ರವರು ನಿಧನ ಹೊಂದಿ ಇಂದಿಗೆ ಮೂರು ವರ್ಷಗಳು ತುಂಬಿವೆ. ಆದರೆ ಅವರ ನೆನಪು ಮಾತ್ರ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ. ಅಮೋಘ ಅಭಿನಯದ ಜೊತೆಗೆ, ಸರಳತೆ, ನಗು ಮತ್ತು ಮಾನವೀಯ ಕಾರ್ಯಗಳಿಂದಲೂ ಅತಿ ಹೆಚ್ಚು ಜನಪ್ರಿಯರಾದ ಅಪ್ಪು 2021 ಅಕ್ಟೋಬರ್ 29 ರಂದು ದಿಡೀರನೇ ಹೃದಯಾಘಾತದಿಂದ ಇಹ ಲೋಕವನ್ನು ತ್ಯಜಿಸಿದಾಗ ಹಿಡಿ ಚಿತ್ರರಂಗ, ಕೋಟ್ಯಂತರ ಅಭಿಮಾನಿಗಳು, ಜನಸಾಮಾನ್ಯರೊಳಗಾಗಿ ಸಂತಾಪ ಸೂಚಿಸಿದರು. ಕಂಬನಿ ಮಿಡಿದರು.
ಪುನೀತ್ ರಾಜ್ ಕುಮಾರ್ 1975ರ ಮಾರ್ಚ್ 17ರಂದು ಚೆನ್ನೈನಲ್ಲಿ ಕನ್ನಡ ಚಿತ್ರರಂಗದ ನಟಸಾರ್ವಭೌಮ ರಾಜ್ ಕುಮಾರ್ ಅವರ ಕಿರಿಯ ಪುತ್ರನಾಗಿ ಜನಿಸಿದ್ದು, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪೂರ್ಣಿಮಾ ಮತ್ತು ಲಕ್ಷ್ಮಿ ಇವರ ಒಡಹುಟ್ಟಿದವರು. . 1999ರಲ್ಲಿ ಅಶ್ವಿನಿ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿ, ವಂದಿತಾ ಮತ್ತು ದ್ರಿತಿ ಎಂಬಿಬ್ಬರು ಹೆಣ್ಣು ಮಕ್ಕಳ ಮುದ್ದಿನ ಅಪ್ಪನಾದರು.
ಸಿನಿಮಾ ರಂಗ :
ಸಿನಿಮಾ ರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ ಪುನೀತ್ ರಾಜ್ ಕುಮಾರ್ 1976 ರಲ್ಲಿ ಪ್ರೇಮದ ಕಾಣಿಕೆ ಚಿತ್ರದಲ್ಲಿ ಬಾಲ ಕಲಾವಿದನಾಗಿ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದರು, ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತಾ, ಅದೃಷ್ಟವಂತ, ಹೊಸ ಬೆಳಕು, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು, ಯಾರಿವನು, ಬೆಟ್ಟದ ಹೂವು ಪರಶುರಾಮ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಬಾಲ ಕಲಾವಿದನಾಗಿ ಮಿಂಚಿದರು..
ಇವರ ಬೆಟ್ಟದ ಹೂ ಚಿತ್ರಕ್ಕೆ ಶೆರ್ಲಿ L. ಅರೋರಾ ಅವರಿಂದ 33 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನಂತರ 2002 ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ತೆರೆ ಮೇಲೆ ಬಂದ ಅಪ್ಪು ಮುಂದೆ ಅನೇಕ ಚಿತ್ರಗಳಲ್ಲಿ ನಟಿಸಿದ್ದು ಇವರ ಕೊನೆಯ ಚಿತ್ರ ಜೇಮ್ಸ್.
ಪುನೀತ್ ರಾಜ್ ಕುಮಾರ್ ರವರು ನಟನೆ ಜೊತೆ ಜೊತೆಗೆ ಹಿನ್ನಲೆ ಗಾಯಕರಾಗಿ,ನಿರ್ಮಾಪಕರಾಗಿ, ಜೊತೆಗೆ ಕನ್ನಡದ ಕೋಟ್ಯಧಿಪತಿಗಳು ಸೇರಿದಂತೆ ಅನೇಕ ರಿಯಾಲಿಟಿ ಷೋ ಗಳನ್ನೂ ನಡೆಸಿಕೊಟ್ಟಿದ್ದಾರೆ. ಇವರಿಗೆ ಕರ್ನಾಟಕ ರತ್ನ,ಮೈಸೂರು ವಿಶ್ವವಿದ್ಯಾನಿಲಯದ 102 ನೇ ಘಟಿಕೋತ್ಸವದಲ್ಲಿ ಮರಣೋತ್ತರ ವಾಗಿ ಗೌರವ ಡಾಕ್ಟರೇಟ್, 2021 ರ ಬಸವಶ್ರೀ ಪ್ರಶಸ್ತಿ, 67ನೇ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಮರಣೋತ್ತರವಾಗಿ ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಲಾಗಿದೆ.
ಸಾಮಾಜಿಕ ಕಾರ್ಯಗಳು.:
26 ಅನಾಥಾಶ್ರಮಗಳು, 16 ವೃದ್ಧಾಶ್ರಮಗಳು ಮತ್ತು 19 ಗೋಶಾಲಾಗಳಿಗೆ ಬೆಂಬಲವಾಗಿದ್ದ ಇವರು ಶಕ್ತಿಧಾಮ ಸಂಸ್ಥೆ ಮೂಲಕ ಸಾವಿರಾರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತ ಅವರಿಗೆ ಬೆಂಬಲವಾಗಿ ನಿಂತಿದ್ದರು.ರಾಜ್ ಕುಮಾರ್ ಕುಟುಂಬದ ಬೆಂಬಲದೊಂದಿಗೆ ಈ ಸ್ವಯಂಸೇವಾ ಸಂಸ್ಥೆಯಿಂದ ಈವರೆಗೆ 4,000 ಕ್ಕೂ ಹೆಚ್ಚು ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಜೊತೆಗೆ 2011 ರಲ್ಲಿ ಕೆಎಂಎಫ್ ಬ್ರಾಂಡ್ ಅಂಬಾಸಿಡರ್ ಆಗಿ ಯಾವುದೇ ಸಂಭಾವನೆ ಪಡೆಯದೇ ಜಾಹಿರಾತು ನೀಡಿದ್ದರು. 2013ರಲ್ಲಿ, ಸರ್ವಶಿಕ್ಷಣ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಮನವಿ ಮಾಡಿದರು. 2019ರಲ್ಲಿ Bengaluru ಮಹಾನಗರ ಸಾರಿಗೆ ನಿಗಮದ ಬ್ರಾಂಡ್ ಅಂಬಾಸಿಡರ್ ಆಗಿದ್ದು, 2019 ರ ಪ್ರವಾಹ ಸಮಯದಲ್ಲಿ ಸಹಾಯ, ಕೋವಿಡ್ ಸಮಯದಲ್ಲಿ ಕರ್ನಾಟಕ ಸಿಎಂ ಪರಿಹಾರ ನಿದಿಗೆ ಸಹಾಯ ನೀಡುವ ಮೂಲಕ ಜನ ಸಾಮಾನ್ಯರಲ್ಲಿ ಹಚ್ಚಳಿಯದೇ ಉಳಿದಿದ್ದಾರೆ. ಇಂತಹ ಕರ್ನಾಟಕ ರತ್ನ 2021ರ ಅಕ್ಟೋಬರ್ 29ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು ಇಂದಿಗೆ ಇವರ ಮೂರನೇ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ.