ಬೆಂಗಳೂರು – ಅಕ್ರಮ ಗಣಿಗಾರಿಕೆಯ ಉರುಳಿನಲ್ಲಿ ಸಿಲುಕಿ ತತ್ತರಿಸಿ ಇದೀಗ ಕೊಂಚಮಟ್ಟಿಗೆ ಅದರಿಂದ ಹೊರಬರುತ್ತಿದ್ದು
ರಾಜಕೀಯ ನೆಲೆ ಕಂಡುಕೊಳ್ಳಲು ಚಿಂತನೆ ನಡೆಸಿರುವ ಗಾಲಿ ಜನಾರ್ದನ ರೆಡ್ಡಿ,ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಬಿಜೆಪಿಯ ಕೆಲವು ನಾಯಕರೊಂದಿಗೆ ವೈಮನಸ್ಯ ಹೊಂದಿರುವ ಜನಾರ್ದನ ರೆಡ್ಡಿ ಅವರಿಗೆ ಈ ಪಕ್ಷದ ಬಾಗಿಲು ಮುಚ್ಚಿ ಬಹು ದಿನಗಳೇ ಕಳೆದಿವೆ. ಜೈಲಿನಿಂದ ಹೊರಬಂದ ಬಳಿಕ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಲಿಚ್ವಿಸಿದ ರೆಡ್ಡಿಗೆ ಕಮಲ ಪಕ್ಷದ ಬಾಗಿಲು ತೆರೆಯಲೇ ಇಲ್ಲ.
ತಮ್ಮ ಆಪ್ತ ಗೆಳೆಯ ಸಾರಿಗೆ ಸಚಿವ ಬಿ.ಶ್ರೀರಾಮುಲು ಜೊತೆ ಬಿಜೆಪಿಯಲ್ಲಿ ಸಕ್ರಿಯವಾಗುವ ಕುರಿತಂತೆ ಹಲವು ಬಾರಿ ಚರ್ಚಿಸಿದರೂ ಪ್ರಯೋಜನವಾಗಿಲ್ಲ.
ತಮ್ಮ ವಿರುದ್ಧದ ಪ್ರಕರಣಗಳು ಇತ್ಯರ್ಥವಾಗುವ ತನಕ ಜನಾರ್ದನ ರೆಡ್ಡಿ ಬಿಜೆಪಿಯಲ್ಲಿ ಸಕ್ರಿಯವಾಗುವುದು ಬೇಡ ಎನ್ನುವುದು ಬಿಜೆಪಿ ನಾಯಕರ ನಿಲುವಾಗಿದೆ.
ಪಕ್ಷದ ನಿಲುವನ್ನು ತಮ್ಮ ಮಿತ್ರ ಜನಾರ್ದನ ರೆಡ್ಡಿ ಅವರಿಗೆ ತಿಳಿಸಿದ ಶ್ರೀರಾಮುಲು ಇನ್ನೂ ಕೊಂಚ ದಿನ ಕಾಯುವಂತೆ ಸಲಹೆ ಮಾಡಿದ್ದರು.ಅದರಂತೆ ಕೆಲ ಕಾಲ ಕಾದು ನೋಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬಿಜೆಪಿ ಬಿಟ್ಟು ಬೇರೆ ಪಕ್ಷ ಕಟ್ಟುವತ್ತ ಗಮನ ಹರಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ದತೆ ನಡೆಸಿರುವ ಜನಾರ್ದನ ರೆಡ್ಡಿ ತಮ್ಮ ಮಿತ್ರ ಶ್ರೀರಾಮುಲು ಅವರನ್ನು ಪಕ್ಷ ಬಿಟ್ಟು ತಮ್ಮೊಂದಿಗೆ ಕೈಜೋಡಿಸಲು ಮನವಿ ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಇಬ್ಬರೂ ನಾಯಕರ ನಡುವೆ ಮನಸ್ಥಾಪ ಉಂಟಾಗಿದೆ.ಬಿಜೆಪಿ ಬಿಟ್ಟು ಬರಲು ಶ್ರೀರಾಮುಲು ನಿರಾಕರಿಸಿದ್ದು,ಇದೀಗ ಜನಾರ್ದನ ರೆಡ್ಡಿ ಒಂಟಿಯಾಗಿ ಪಕ್ಷ ಕಟ್ಟಲು ನಿರ್ಧರಿಸಿದ್ದಾರೆ.
ನೂತನ ಪಕ್ಷದಿಂದ ಕೊಪ್ಪಳದ ಗಂಗಾವತಿಯಲ್ಲಿ ಕಣಕ್ಕಿಳಿಯುವುದು ಖಚಿತ ಎಂದಿರುವ ಅವರು ಇದೀಗ ಅಲ್ಲಿಯೇ ಮನೆ ಮಾಡಿ ಗೃಹ ಪ್ರವೇಶ ಕೂಡಾ ಮುಗಿಸಿದ್ದಾರೆ.
ನೂತನ ಪಕ್ಷಕ್ಕೆ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೆಸರಿಟ್ಟಿದ್ದಾರೆ. ಈ ಪಕ್ಷಕ್ಕೆ ಮಾನ್ಯತೆ ನೀಡುವಂತೆ ಅವರ ಆಪ್ತರು ದೆಹಲಿಗೆ ತೆರಳಿ ಚುನಾವಣಾ ಆಯೋಗಕ್ಕೆ ಹೊಸ ಪಕ್ಷದ ಹೆಸರು ಸಲ್ಲಿಕೆ ಮಾಡಿದ್ದಾರೆ
ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ರೆಡ್ಡಿ ಗಂಗಾವತಿಯಿಂದ ಹಾಗೂ ಅವರ ಪತ್ನಿ ಗದಗದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲ, ರೆಡ್ಡಿ ತಮ್ಮ ಹೊಸ ಪಕ್ಷದ ಮೂಲಕ ರಾಜ್ಯದ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ ಎಂದೂ ಹೇಳಲಾಗಿದೆ.
ಸದ್ಯ ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು ತಮ್ಮ ಪಕ್ಷಕ್ಕೆ ಬೇರೆ ಪಕ್ಷದವರ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಬೇರೆ ಬೇರೆ ಜಿಲ್ಲೆಯ ಟಿಕೆಟ್ ಆಕಾಂಕ್ಷಿಗಳಿಂದಲೂ ರೆಡ್ಡಿಯೊಂದಿಗೆ ಮಾತುಕತೆ ನಡೆಯುತ್ತಿದೆ. ಆರಂಭದಲ್ಲಿ ನೂತನ ಪಕ್ಷವನ್ನು ರೆಡ್ಡಿಯ ಆಪ್ತರು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
Previous Articleಅತ್ಯಾಚಾರ ಆರೋಪದಡಿ ಹೊಡೆದು ಕೊಂದರೆ?
Next Article ಭಕ್ತರು ಹೋಗುವ ದಾರಿಗೆ ಮೊಳೆ ಹೊಡೆದ ಕೇಡಿಗಳು