ಬೆಂಗಳೂರಿನ ಜಯನಗರಕ್ಕೆ ಇನ್ನೊಂದು ಹೆಸರನ್ನಿಡಬಹುದೇನೊ – ಸಭ್ಯರ ನಗರ ಅಂತ. ಬೆಂಗಳೂರಿನ ಅತ್ಯಂತ ಅಚ್ಚುಕಟ್ಟಾದ ಸುಸಜ್ಜಿತ ಬಡಾವಣೆ ಎಂದು ಹೆಸರುವಾಸಿಯಾಗಿ ಈ ಬಡಾವಣೆ ಸ್ಥಾಪಿಸಲ್ಪಟ್ಟಾಗ ಇದು ಏಷ್ಯಾದ ಅತ್ಯಂತ ದೊಡ್ಡ ಬಡಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕ್ರಮೇಣ ಬಹಳಷ್ಟು ನಿರ್ಲಕ್ಷ್ಯಕ್ಕೆ ಒಳಪಟ್ಟರೂ ಜಯನಗರ ಇಂದಿಗೂ ತನ್ನ ಸಭ್ಯ ಸುಸಂಸ್ಕತ ಮುಖವನ್ನು ಕಳಂಕರಹಿತವಾಗಿ ಉಳಿಸಿಕೊಂಡೇ ಬಂದಿದೆ. ಸಭ್ಯ ಹೇಗೆಂದರೆ ಜಯನಗರದಲ್ಲಿ ರಾತ್ರಿಯಾಯಿತೆಂದರೆ ಗಲಾಟೆ ಇರುವುದಿಲ್ಲ ಒಂಬತ್ತು ಗಂಟೆಯ ನಂತರ ಜನ ಓಡಾಡುವುದೂ ಕಡಿಮೆ. ಬಹುತೇಕ ಜನರು ತಮ್ಮ ನೆರೆ ಹೊರೆಯವರೊಂದಿಗೆ ಕಚ್ಚಾಡುವುದಿಲ್ಲ, ಕಸ ಹಾಕುವುದೂ ಕಡಿಮೆ. ನಿಯಮಗಳನ್ನು ಪಾಲಿಸುತ್ತಾರೆ ಮತ್ತು ಯಾರ ತಂಟೆಗೂ ಹೋಗುವುದಿಲ್ಲ. ಈಗ ಜಯನಗರಕ್ಕೆ ಅದೇ ಸಮಸ್ಯೆಯಾಗಿಬಿಟ್ಟಿದೆ. ಜಯನಗರದ ನಿವಾಸಿಗಳು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸೋದಿಲ್ಲ, ಕಾರ್ಪೊರೇಟರ್ ಗಳು ಅಧಿಕಾರಿಗಳು ಅಥವ ಶಾಸಕರೊಂದಿಗೂ ಜಗಳ ಮಾಡೋದಿಲ್ಲ, ಬಲವಂತವಾಗಿ ಏನನ್ನೂ ಆಗ್ರಹಿಸೋದಿಲ್ಲ, ತೊಂದರೆ ಕೊಡುವ ಯಾರಿಗೂ ತಿರುಗಿ ಬೆದರಿಕೆ ಒದ್ದೋಡಿಲ್ಲ. ಇಲ್ಲಿನ ಬಹುತೇಕ ನಿವಾಸಿಗಳು ಸುಶಿಕ್ಷಿತ ಸಜ್ಜನರು. ಬಹುತೇಕ ಎಲ್ಲಾ ಮನೆಗಳಲ್ಲೂ ಹಿರಿಯ ನಾಗರೀಕರಿರುವುದರಿಂದ ಮತ್ತು ಅನೇಕಾನೇಕ ಮನೆಗಳಲ್ಲಿ ಯುವಕರೆಲ್ಲ ವಿದೇಶದಲ್ಲೊ ಬೇರೆ ಊರಿನಲ್ಲೋ ನೌಕರಿಯಲ್ಲಿರುವುದರಿಂದ ಈ ಬಡಾವಣೆಯ ಮನೆಯ ಹಿರಿಯ ಜೀವಗಳು ತಮ್ಮ ಅರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಿಕೊಂಡು ಬದುಕಿದರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದರೆ. ಅದರ ಪ್ರಯೋಜನ ವನ್ನು ಸಂಪೂರ್ಣವಾಗಿ ಪಡೆದುಕೊಂಡ ಈ ಏರಿಯಾಕ್ಕೆ ಸಂಬಂಧಪಟ್ಟ ಪುಢಾರಿಗಳು, ಅಧಿಕಾರಿಗಳು ಮತ್ತು ಶಾಸಕರೂ ಮಂತ್ರಿಗಳು ಒಂದಷ್ಟು ತೇಪೆ ಹಾಕುವ ಕೆಲಸಗಳನ್ನು ಆಗಾಗ ಮಾಡಿ ನಾಟಕವಾಡಿಕೊಂಡು ತಮ್ಮ ವೃತ್ತಿಯನ್ನು ಸಾಗಿಸುತ್ತಿದ್ದಾರೆ.
ಜಯನಗರದಲ್ಲಿ ಯಾರೇ ಆದರೂ ಇಲ್ಲಿನ ವಿಶಾಲವಾದ ರಸ್ತೆಗಳು ಅಗಲವಿರುವ ಫೂಟ್ ಪಾತ್ ಗಳು, ಆಟದ ಮೈದಾನಗಳು, ತಂಗುದಾಣಗಳು, ಹೂದೋಟಗಳು ವಿಹಾರಯೋಗ್ಯ ತಾಣಗಳನ್ನು ನೋಡಬಹುದು. ಆದರೆ ಈಗ ಬಹುತೇಕ ರಸ್ತೆಗಳು ಚಂದ್ರನ ಮೇಲ್ಮೈಯನ್ನು ಹೋಲುತ್ತವೆ. ಪ್ರಧಾನಿ ಮೋದಿಯವರು ಬಂದಿದ್ದಾಗ ಜಾಣತನದಿಂದ ಒಂದು ರಸ್ತೆಯ ಹಾಳಾದ ಬದಿಯಲ್ಲಿ ಹೋಗದಂತೆ ನೋಡಿಕೊಂಡು ಒಂದಿಷ್ಟು ಸರಿಯಿರುವ ಭಾಗದಲ್ಲಿ ಅವರ ಮೆರವಣಿಗೆ ನಡೆಸಿಕೊಟ್ಟರು. ಪಾರ್ಕ್ ಗಳು ಒಂದಷ್ಟೂ ನಿರ್ವಹಣೆ ಕಾಣದೆ ಜನ ಅವುಗಳಿಂದ ದೂರ ಉಳಿಯುವಂತಾಗಿದೆ. ಮಳೆ ಬಂದರೆ ಪಾರ್ಕ್ ಗಳಲ್ಲಿ ನೀರು ನಿಲ್ಲುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದಿರುವುದು ಇದೆಲ್ಲಕ್ಕೆ ಕಾರಣ ಎನ್ನುವ ಸಬೂಬು ನೀಡಲಾಗುತ್ತದೆ. ಆರಿಸಲ್ಪಟ್ಟ ಜನಪ್ರತಿನಿಧಿಗಳಿದ್ದಾಗ ನಡೆದ ತರ್ಕರಹಿತ ಸ್ವೇಚ್ಚಾಚಾರದ ಅಭಿವೃದ್ಧಿ ಕಾರ್ಯಗಳ ಕಾರಣದಿಂದಾಗಿ ಪಾರ್ಕ್ ಗಳು ಹೀಗಾಗಿರುವುದು ಅವರ ಜಾಣ ಕುರುಡಿಗೆ ಕಾಣಿಸುವುದಿಲ್ಲ.
ಫುಟ್ ಪಾತ್ ಗಳಿಗೆ ಅನೇಕ ಕಡೆ ಕಲ್ಲು ಹಾಸು ಅಥವ ಕಾಂಕ್ರೀಟ್ ಸ್ಲಾಬ್ ಗಳನ್ನು ಹಾಕಲಾಗಿದೆ. ಆ ಕಲ್ಲುಗಳನ್ನು ಅಥವ ಸ್ಲಾಬ್ ಗಳನ್ನು ಒಂದು ಇಂಚು ದಪ್ಪದ ಕಾಂಕ್ರೀಟ್ ಹಾಸಿನ ಮೇಲೆ ಹಾಕಿರುವುದರಿಂದ ಕ್ರಮೇಣ ಭೂಮಿ ಕುಸಿದಿದೆ. ಕಲ್ಲುಗಳು ಸ್ಲಾಬ್ ಗಳೆಲ್ಲ ಅನೇಕ ಕಡೆ ಹುದುಗಿ ಹೋಗಿವೆ. ಅನೇಕ ಕಡೆ ಫೂಟ್ ಪಾತ್ ಗಳು ದೊಡ್ಡ ಗುಂಡಿಗಳೊಂದಿಗೆ ರಾರಾಜಿಸುತ್ತಿವೆ. ಹಿರಿ ಜೀವಗಳೇ ಹೆಚ್ಚು ಇರುವ ಜಯನಗರದಲ್ಲಿ ಅವರು ಆ ಫುಟ್ ಪಾತ್ ಗಳ ಮೇಲೆ ನಡೆದಾಡಿದರೆ ಅವರ ಕೈ ಕಾಲು ಮುರಿಯುವ ಬೆದರಿಕೆಯನ್ನು ಈ ಫುಟ್ ಪಾತ್ ಗಳು ನೀಡುತ್ತಿರುವಂತಿದೆ. ಹಾಗೆ ಅನೇಕ ಮುಖ್ಯ ರಸ್ತೆ ಗಾಳ ಫೂಟ್ ಪಾತ್ ನಲ್ಲಿ ಬೀದಿ ದೀಪ ವಿಲ್ಲದೆ ಜನ ಕತ್ತಲಲ್ಲಿ ಗುಂಡಿ, ಕಲ್ಲುಗಳ ನಡುವೆ ಜಾಗರೂಕತೆಯಿಂದ ಕಾಲಿಟ್ಟು ಸರ್ಕಸ್ ಮಾಡಿಕೊಂಡು ನಡೆಯಬೇಕಿದೆ. ಇನ್ನೆಲ್ಲೋ ಫುಟ್ ಪಾತ್ ಚೆನ್ನಾಗಿದೆ ಎಂದು ಇಟ್ಟುಕೊಳ್ಳಿ, ಅಲ್ಲಿ ಯಾರೋ ಸ್ವಯಂ ಘೋಷಿತ ಬಡವ ನೂರಾರು ಜನರಿಗೆ ಊಟದ Businessದ ವ್ಯವಸ್ಥೆ ಮಾಡಿರುತ್ತಾನೆ. ಕೆಲವು ಇಂಥಾ ಅಂಗಡಿಗಳಂತೂ ಫುಟ್ಪಾತ್ ನಲ್ಲಿ ವ್ಯಾಪಾರ ಮಾಡುವುದು ಮಾತ್ರವಲ್ಲದೆ ಕುರ್ಚಿ ಟೇಬಲ್ ಗಳ ಸಮೇತ ಒಂದು ಸಣ್ಣ ರೆಸ್ಟೋರೆಂಟ್ ಅನ್ನೇ ತೆರೆದುಬಿಟ್ಟಿದ್ದಾರೆ.
ಇನ್ನು ಇದನ್ನೆಲ್ಲಾ ನಿಭಾಯಿಸಿಕೊಂಡು ಮುಂದೆ ಬಂದರೆ ಬೀದಿ ಬದಿಯ ಸುಸಜ್ಜಿತ ಪೆಟ್ಟಿಗೆ ಅಂಗಡಿಗಳ ಮುಂದೆ ನಿಂತ ನಾಗರಿಕರು ಉಫ್ ಎಂದು ನಡೆದಾಡುವವರ ಮುಖಕ್ಕೆ ಸಿಗರೇಟ್ ಹೊಗೆ ಬಿಡುತ್ತಿರುತ್ತಾರೆ. ಜಯನಗರ ಫೋರ್ಥ್ ಬ್ಲಾಕ್ ನಲ್ಲಂತೂ ಪರಿಸ್ಥಿತಿಯನ್ನು ದೇವರೇ ಕಾಪಾಡಬೇಕು. ಹಿಂದೆ ಮುಸಲ್ಮಾನರನ್ನು ಓಲೈಸಿ ಅವರಿಗೆ ಅಕ್ರಮ ಅಂಗಡಿಗಳನ್ನಿಡಲು ಅವಕಾಶ ಮಾಡಲಾಗಿದೆ ಎಂದು ಅರೋಪಿಸಿದ ಜನರು ಈಗ ಎಲ್ಲಾ ಧರ್ಮದವರಿಗೂ ಫೂಟ್ ಪಾತ್ ಆಕ್ರಮಿಸಲು ಅವಕಾಶ ಮಾಡಿಕೊಟ್ಟು ಸರ್ವಧರ್ಮ ಸಮಭಾವ ಮೆರೆದಿದ್ದಾರೆ. ಮಳೆ ಬಂದರಂತೂ ಜಯನಗರದ ಜನ ಫೋರ್ಥ್ ಬ್ಲಾಕ್ ಕಡೆ ಹೋಗೋದೇ ಬೇಡ ಎಂದು ನಿರ್ಧರಿಸುವಷ್ಟು ಪರಿಸ್ಥಿತಿ ಖರಾಬಾಗಿಬಿಟ್ಟಿದೆ. ಫೂಟ್ ಪಾತ್ ಗಳನ್ನು ಅಂಗಡಿ ಇಟ್ಟುಕೊಂಡಿರುವ ಕಡುನಿರ್ಗತಿಕರಿಗೆ ಬಿಟ್ಟು ಕರುಣಾಭಾವವನ್ನು ಮೆರೆದು ತೆರಿಗೆ ಕಟ್ಟುವ ಮಹಾನುಭಾವರೆಲ್ಲ ಮಳೆಯಲ್ಲಿ ಕೊಚ್ಚೆಯಲ್ಲಿ ಮುಖ್ಯ ರಸ್ತೆಯ ಮೇಲೆ ಜೋರಾಗಿ ಚಲಿಸುವ ವಾಹನಗಳ ನಡುವೆ ಜಾಗಮಾಡಿಕೊಂಡು ನಡೆಯಬೇಕಾಗಿದೆ. ಆದರ ಮಧ್ಯೆ ಜಯನಗರ ಮತ್ತು ಅದಕ್ಕೆ ಅಂಟಿಕೊಂಡಿರುವ ಪದ್ಮನಾಭ ಕ್ಷೇತ್ರದಲ್ಲೂ ಫ್ಲೆಕ್ಸ್ ಹಾವಳಿ ಆರಂಭವಾಗಿದೆ. ಒಂದು ಕಡೆ ಸರ್ಕಾರಗಳನ್ನು ವಿರೋಧಿಸಿದರೆ ದೇಶದ್ರೋಹಿ ಎನ್ನುವ ಪಟ್ಟ ಕಟ್ಟಿಕೊಳ್ಳಬೇಕು ಎನ್ನುವ ಆತಂಕವಿದ್ದರೆ ಈ ಫ್ಲೆಕ್ಸ್ ಗಳನ್ನು ವಿರೋಧಿಸಿದರೆ ಎಂಥಾ ಅಪ್ಪಟ ಕನ್ನಡಿಗನೂ ಕನ್ನಡ ದ್ರೋಹಿ ಸಿನೆಮಾ ಜನರ ವೈರಿ ಎನ್ನುವ ಎಲ್ಲ ಹಣೆಪಟ್ಟಿಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ.
ಜಯನಗರ ಭಾಗದಲ್ಲಿ ಫುಟ್ಪಾತ್ ಗಳಿಗೆ ಮಾಡಿದ್ದಕಿಂತ ಹೆಚ್ಚು ಖರ್ಚನ್ನು ಮೂರ್ತಿ ಗಳ ನಿರ್ಮಾಣಕ್ಕೆ ಸ್ಥಾಪನೆಗಾಗಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಇಲ್ಲಿ ಎಲ್ಲಾ ಪಕ್ಷಗಳವರೂ ಒಬ್ಬರ ಕೈ ಇನ್ನೊಬ್ಬರ ಜೇಬಿನಲ್ಲಿ ಎನ್ನುವಂತೆ ವರ್ತಿಸುತ್ತಿದ್ದಾರೆ. ಯಾವ ರಾಜಕಾರಣಿಯೂ ಇನ್ನೊಬ್ಬ ರಾಜಕಾರಣಿಯನ್ನು ವಿರೋಧಿಸುವುದು ಜಯನಗರದಲ್ಲಿ ಕಾಣುವುದಿಲ್ಲ ಆ ಮಟ್ಟಕ್ಕೆ ಜಯನಗರದಲ್ಲಿ ರಾಜಕಾರಣಿಗಳೂ ಸಭ್ಯರಾಗಿದ್ದರೆ ಎನ್ನಬಹುದು. ಇದಕ್ಕೆ ಇನ್ನೊಂದು ಕಾರಣ ಏನಿರಬಹುದೆಂದರೆ ಇಲ್ಲಿ ಎಲ್ಲರಿಗೂ ಮೇಯಲು ಅವಕಾಶವಿರುವುದರಿಂದ ಒಬ್ಬರ ಹೊಲಕ್ಕೇ ಇನ್ನೊಬ್ಬರು ಬಾಯಿಡುವುದಿಲ್ಲ. ಜಯನಗರದಲ್ಲಿ ವ್ಯಾಪಾರ ಕಷ್ಟವಾಗಿ ಅನೇಕ ಮಂದಿ ಕಾನೂನು ರೀತ್ಯ ವ್ಯವಹಾರ ನಡೆಸಿ ಬದುಕುವುದು ಹೇಗೆಂದು ಚಿಂತಾಕ್ರಾಂತರಾಗಿರುವಾಗ ಅಕ್ರಮವಾಗಿ ವ್ಯಾಪಾರ ಮಾಡುವವರೇ ಇಲ್ಲಿ ಪೊಗದಸ್ತಾದ ಲಾಭ ಮಾಡಿಕೊಳ್ಳುತ್ತಿದ್ದಾರಂತೆ. ಅಂಥಾ ಅಕ್ರಮ ವ್ಯಾಪಾರಿಗಳು ನಿರಾತಂಕದಿಂದ ವ್ಯಾಪಾರ ಮಾಡಿದರೆ ಮಾತ್ರ ಅನೇಕ ಅಧಿಕಾರಿಗಳು ಮತ್ತು ಮರಿ ರಾಜಕಾರಣಿಗಳು ಹೊಟ್ಟೆ ಹೊರೆಯಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ಜಯನಗರದಲ್ಲಿ ಉತ್ತಮವಾದ ಆಟದ ಮೈದಾನಗಳಿವೆ ಈ ಆಟದ ಮೈದಾನದ ಬಹುಭಾಗವನ್ನು ಈಗಾಗಲೇ ಕಟ್ಟಡ ನಿರ್ಮಿಸಿ ಕಬಳಿಸಿಯಾಗಿದೆ. ಇನ್ನು ಉಳಿದ ಮೈದಾನವಿರುವುದು ಮಕ್ಕಳು ಮತ್ತು ಯುವಕರು ಆಟ ಆಡಲು, ಆರೋಗ್ಯ ಕಾಪಾಡಿಕೋಳ್ಳಲು ಮತ್ತು ಉತ್ತಮ ಸಧೃಢ ಪ್ರಜೆಗಳಾಗಲು. ಆದರೆ ಈ ಆಟದ ಮೈದಾನಗಳೂ ವ್ಯವಹಾರ ಕೇಂದ್ರಗಳಾಗುತ್ತಿದೆ. ಈ ಮೈದಾನಗಳಲ್ಲಿ ಕೆಲವು ದಿನಗಳಿಗೊಮ್ಮೆ ತಿಂಡಿ ಉತ್ಸವ ಗಾಯನ ಉತ್ಸವ ರಾಜಕೀಯ ದೊಂಬರಾಟ ಇನ್ನೇನೋ ಮಗದೇನೊ ಎಂಬಂತೆ ಮಕ್ಕಳಿಗೆ ಯುವಕರಿಗೆ ಅನಾನುಕೂಲ ಮಾಡಲಾಗುತ್ತಿದೆ. ಪ್ರತಿಭಟಿಸಿದವರ ಬಾಯಿ ಮುಚ್ಚಲಾಗುತ್ತಿದೆ. ಇದರ ಬಗ್ಗೆ ಅನೇಕರು ಅನೇಕ ಬಾರಿ ಆಕ್ಷೇಪಿಸಿದರೂ ಯಾರೂ ಸಂಬಂಧಪಟ್ಟವರು ಇದರ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.
ಜಯನಗರ ಒಂದು ಶ್ರೀಮಂತ ಪ್ರದೇಶ. ಜನ ಹೇಳುವ ಪ್ರಕಾರ ಈ ಏರಿಯಾದ ಪ್ರದೇಶ ವಾಸ್ತುವಿನ ಪ್ರಕಾರ ಕೂಡ ಬಹಳ ಯೋಗ್ಯ ಆದ್ದರಿಂದಲೇ ಅನೇಕ ಮಂದಿ ಇಲ್ಲಿ ನಿವೇಶನಕ್ಕೆ ಎಷ್ಟೇ ದುಡ್ಡು ಕೇಳಿದರೂ ಅದನ್ನು ಕೊಂಡುಕೊಂಡು ಕಟ್ಟಡ ಕಟ್ಟುತ್ತಾರೆ. ಈ ಕಾರಣದಿಂದ ವರ್ಷಪೂರ್ತಿ ಇಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿರುತ್ತದೆ. ಕಟ್ಟಡ ಕಟ್ಟುವವರು ಬಹಳಷ್ಟು ಸಲ ಬೇರೆ ಕಡೆಯಿಂದ ಬಂದವರಾಗಿದ್ದು ಕಟ್ಟಡ ಕಟ್ಟುವಾಗ ನಿಯಮಗಳನ್ನು ಗಾಳಿಗೆ ತೂರಿ ನೆರೆಹೊರೆಯವರಿಗೆ ವರ್ಷಗಟ್ಟಲೆ ಧೂಳು ಕುಡಿಸಿ, ನಿದ್ದೆ ಕೆಡಿಸಿ ಅವರ ನೆಮ್ಮದಿಯನ್ನು ಹಾಳು ಮಾಡುತ್ತಿರುತ್ತಾರೆ. ಮನೆ ಕಟ್ಟುವವರು ರಸ್ತೆ ಮೇಲೆ ಫೂಟ್ ಪಾತ್ ಮೇಲೆ ಹಾಕಿರುವ ತ್ಯಾಜ್ಯ ಹಾಗೇ ವರ್ಷಗಟ್ಟಲೆ ಅಲ್ಲೊಂದು ಸ್ಮಾರಕವಾಗಿ ಬಿಡುತ್ತದೆ. ಆದರೂ ಯಾವೊಬ್ಬ ಅಧಿಕಾರಿಯೂ ರಾಜಕಾರಣಿಯೂ ಇದರ ಬಗ್ಗೆ ಗಮನ ಹರಿಸುವುದಿರಲಿ ಅವರಿಗೆ ಇದರ ಅರಿವು ಕೂಡ ಇದ್ದಂತಿಲ್ಲ. ಅಗಲವಾಗಿ ಅಡೆ ತಡೆ ಇಲ್ಲದಂತಿರುವ ರಸ್ತೆಗಳಲ್ಲಿ ಜೋರಾಗಿ ಶಬ್ದ ಮಾಡಿಕೊಂಡು ಕೆಲವರು ಮಧ್ಯ ರಾತ್ರಿಯಲ್ಲಿ ವಾಹನ ಚಲಾಯಿಸುತ್ತಾ ಹಿರಿಯ ನಾಗರಿಕರಿಗೆ ತೊಂದರೆ ಕೊಡುತ್ತಿರುತ್ತಾರೆ. ಅದೂ ಯಾವ ಅಧಿಕಾರಿಯ ಗಮನಕ್ಕೂ ಬಂದಂತಿಲ್ಲ.
ಲ್ಲಿನ ರಾಜಕೀಯ ನಾಯಕರು ಹೆಚ್ಚಾಗಿ ಧಾರ್ಮಿಕ ಕಾರ್ಯಕ್ರಮ, ಸ್ವಪ್ರತಿಷ್ಠೆಯ ಕಾರ್ಯಕ್ರಮಗಳು, ಬೇರೆ ಪ್ರದೇಶಗಳಿಂದ ಜನ ಬಂದು ಇಲ್ಲಿ ತಿಂದು ಉಂಡು ಶಬ್ದ ಮಾಡಿ ಕಸ ಹಾಕಿ ಹೋಗಬಹುದಾದಂಥ ಕಾರ್ಯಕ್ರಮಗಳನ್ನೇ ಹೆಚ್ಚು ಮಾಡುವುದರಿಂದ ಅವರಿಗೆಲ್ಲ ಜಯನಗರದ ಸಮಸ್ಯೆಗಳಿಗೆ ಗಮನ ಕೊಡುವ ಸಮಯ ವಿರಲಿಕ್ಕಿಲ್ಲ. ಡಾಂಬರು ಹಾಕಿದ ರಸ್ತೆಗೇ ಮತ್ತೆ ಮತ್ತೆ ಡಾಂಬರು ಹಾಕುವುದು ಹೇಗೆ ಆರು ತಿಂಗಳಿಗೊಮ್ಮೆ ಕಿತ್ತು ಹೋಗುವ ಫೂಟ್ ಪಾತ್ ಗಳನ್ನು ಮೂರು ತಿಂಗಳಿಗೇ ಕಿತ್ತು ಹೋಗುವಂತೆ ಹೇಗೆ ನಿರ್ಮಾಣ ಮಾಡುವುದು ಎಂಬುದನ್ನೆಲ್ಲ ನೋಡಬೇಕೆಂದರೆ ಜನ ಜಯನಗರಕ್ಕೆ ಬರಲೇಬೇಕು. ಜಯನಗರ ಪೊಲೀಸ್ ಸ್ಟೇಷನ್ ನಲ್ಲಿ ಹೊಯ್ಸಳ ವಾಹನ ಕೆಟ್ಟು ಅನೇಕ ದಿನಗಳ ಕಾಲ ಒಂದೂ ಹೊಯ್ಸಳ ಇಲ್ಲದಿದ್ದಿದ್ದು ಯಾರಿಗೂ ಆತಂಕ ಮೂಡಿಸಲಿಲ್ಲ.
ಜಯನಗರದ ಅನೇಕ ಅಧಿಕಾರಿಗಳು ಮತ್ತು ರಾಜಕಾರಣಿಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲೇ ಹೆಚ್ಚು ಆಸಕ್ತರಾಗಿದ್ದಾರೆ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಿದೆ. ಇಂಥಾ ಸಮಸ್ಯೆಗಳ ಬಗ್ಗೆ ಹಿಂದೆಲ್ಲ ನಾಗರಿಕರ ಹಿತರಕ್ಷಣಾ ಸಂಘಟನೆಗಳು ಹೋರಾಡುತ್ತಿದ್ದವು. ಈಗ ಅವು ಕೂಡ ಕಾಣಸಿಗುತ್ತಿಲ್ಲ. ಏನೇ ಹೇಳಿ ಅತ್ಯುತ್ತಮ ವಾಗಿ ಬೇರೆಲ್ಲಾ ಪ್ರದೇಶಗಳಿಗೆ ಮಾದರಿಯಾಗಬಹುದಿದ್ದ ಜಯನಗರ ಈಗ ಇಲ್ಲಿನ ಬಹುಕಾಲದ ನಿವಾಸಿಗಳ ಉದಾಸೀನತೆ, ಹೊರಗಿನವರ ದುರಾಸೆ ಮತ್ತು ರಾಜಕಾರಣಿಗಳ ಹಾಗು ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ದಿನೇ ದಿನೇ ಹಾಳಾಗುತ್ತಾ ಅನಾಥವಾಗುತ್ತಿದೆ.