Bengaluru
ಕೇಂದ್ರ ಸರಕಾರದ Election ಕಾಲದ ಬಜೆಟ್ನಲ್ಲಿ ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300ಕೋಟಿ ರೂಪಾಯಿ ಬಿಡುಗಡೆ ಮಾಡಿರುವ ಕ್ರಮ ಸ್ವಾಗತಾರ್ಹವಾಗಿದೆ. ಆದರೂ ರಾಜ್ಯಕ್ಕೆ ಚುನಾವಣೆ ಕಾಲದಲ್ಲಾದರೂ ಇನ್ನಷ್ಟು ಹೊಸ ಯೋಜನೆಗಳು ಬರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು JDS ವ್ಯಾಖ್ಯಾನಿಸಿದೆ. ‘ಈ Budget ಬಗ್ಗೆ ತಮಗೆ ಭಾರಿ ನಿರೀಕ್ಷೆಯಿತ್ತು ಆದರೆ, ಸಚಿವೆ ನಿರ್ಮಲಾ ಸೀತಾರಾಮನ್ ಅದನ್ನು ಹುಸಿಗೊಳಿಸಿದ್ದಾರೆ’ ಎಂದು JDS ನಾಯಕ ಶರವಣ ಹೇಳಿದ್ದಾರೆ.
‘ಮೂಲಭೂತ ಸೌಕರ್ಯ, ನಿರುದ್ಯೋಗ ನಿವಾರಣೆ, ನಗರಾಭಿವೃದ್ದಿ ವಿಚಾರದಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಮೀಸಲಿಡಲಾಗಿದೆ ಆದರೂ, ಕರ್ನಾಟಕದ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲದ ಬಜೆಟ್ ಇದಾಗಿದೆ’ ಎಂದು ಟೀಕಿಸಿದ್ದಾರೆ. ‘ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಮಹದಾಯಿ, ಮೇಕೆದಾಟು ಯೋಜನೆಗಳ ವಿಚಾರದಲ್ಲಿ ಬಜೆಟ್ ಯಾವ ಸ್ಪಂದನೆಯನ್ನು ನೀಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಒತ್ತಡಕ್ಕೆ ಕೇಂದ್ರ ಮಣಿದಿಲ್ಲ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳುವ ರೀತಿ ಡಬಲ್ ಇಂಜಿನ್ ಸರಕಾರದ ಸಾಧನೆ, ಸಮನ್ವಯತೆ ಸುಳ್ಳು ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದಿದ್ದಾರೆ.
‘ಎತ್ತಿನ ಹೊಳೆ ಯೋಜನೆಯ ಬಗ್ಗೆಯೂ ಸರಕಾರ ಚಕಾರವೆತ್ತಿಲ್ಲ. ಇನ್ನು ರಾಜ್ಯದ ಮಹತ್ವಾಕಾಂಕ್ಷೆಯ ರೈಲ್ವೆ ಯೋಜನೆಗಳ ಬಗ್ಗೆ ನಿರ್ದಿಷ್ಟ ಭರವಸೆಗಳು ಈಡೇರಿಲ್ಲ. ಅದರಲ್ಲೂ ವಿಶೇಷವಾಗಿ ಕಳೆದ ಬಜೆಟ್ನಲ್ಲಿ ಘೋಷಿಸಿದ ಬೆಂಗಳೂರು ಸಬರ್ಬನ್ ರೈಲ್ವೆ ಯೋಜನೆಗೆ ಯಾವುದೇ ನಿರ್ದಿಷ್ಟ ನೆರವಿನ ಪ್ರಸ್ತಾಪವಿಲ್ಲ’ ಎಂದು ಹೇಳಿದ್ದಾರೆ. ‘ಇನ್ನು ಮುಖ್ಯವಾಗಿ ರೈತರ ವಿಚಾರದಲ್ಲಿ ಕೇಂದ್ರ ಸರಕಾರ ಈ ಬಜೆಟ್ ನಲ್ಲಿ ಯಾವುದೇ ಮಹತ್ತರ ಕೊಡುಗೆ ನೀಡಿಲ್ಲ. ರೈತರ ಖಾತೆಗೆ ನೇರವಾಗಿ ರವಾನಿಸುವ 6 ಸಾವಿರ ರೂಪಾಯಿ ಹಣವನ್ನು ಹೆಚ್ಚಿಸುವ ನಿರೀಕ್ಷೆ ಹುಸಿಯಾಗಿದೆ. ಸಿರಿಧಾನ್ಯ ಅಭಿವೃದ್ದಿ ಬಗ್ಗೆ ಘೋಷಣೆ ಹೊರಡಿಸಲಾಗಿದೆಯಾದರೂ, ಹೊಸ ರೀತಿಯಲ್ಲಿ ಅದರ ಬೆಳೆಗಾರರಿಗೆ ಸ್ಥಿರತೆ ತಂದುಕೊಡುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ವ್ಯಾಪ್ತಿಯಲ್ಲಿ ತರುವ ಬಗ್ಗೆ ರಾಷ್ಟ್ರೀಯ ನೀತಿಯನ್ನು ಘೋಷಿಸುವಲ್ಲಿ ಈ ಬಜೆಟ್ ವಿಫಲ ಆಗಿದೆ’ ಎಂದು ತಿಳಿಸಿದ್ದಾರೆ.
‘ರಾಜ್ಯಕ್ಕೆ ಯೋಜನಾ ಆಯೋಗದ ಶಿಫಾರಸಿನಂತೆ ಹೆಚ್ಚುವರಿ ಅನುದಾನ ನೀಡುವ ವಿಚಾರದ ಬಗ್ಗೆಯೂ ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ. ಒಟ್ಟಾರೆ ನಮ್ಮವರೇ ಆದ, ನಮ್ಮದೇ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಚುನಾವಣೆ ಕಾಲದಲ್ಲಾದರೂ ಸಮಗ್ರವಾಗಿ ಬಂಪರ್ ಕೊಡುಗೆ ನೀಡುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ’ ಎಂದು ಹೇಳಿದ್ದಾರೆ.