ಬೆಂಗಳೂರು – ಲೋಕಸಭೆ Election ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಪಕ್ಷಾಂತರ ಪರ್ವ ತೀವ್ರ ಸ್ವರೂಪ ಪಡೆದುಕೊಂಡಿದೆ. ಜೆಡಿಎಸ್ (JDS) ಮತ್ತು ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಂದಾಗುತ್ತಿದ್ದಾರೆ.
ಅದರಲ್ಲೂ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟ ಬೆನ್ನಲ್ಲೇ ಹಲವು ನಾಯಕರು ಕಾಂಗ್ರೆಸ್ ನತ್ತ ಮುಖ ಮಾಡುತ್ತಿದ್ದಾರೆ ಈ ಸಾಲಿಗೆ ಇದೀಗ ಮಾಜಿ ಶಾಸಕರಾದ ಬಿಸಿ ಗೌರಿಶಂಕರ್ ಮತ್ತು ಆರ್ ಮಂಜುನಾಥ್ ಸೇರ್ಪಡೆಯಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ತುಮಕೂರು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಬಿ ಸಿ ಗೌರಿಶಂಕರ್ ಮತ್ತು ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಆರ್ ಮಂಜುನಾಥ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಜೆಡಿಎಸ್ ನ ಪಾಲಿಗೆ ದೊಡ್ಡ ಹೊಡೆತ ಎಂದು ಬಣ್ಣಿಸಲಾಗುತ್ತಿದೆ.
ಇದರ ಬೆನ್ನಲ್ಲೇ ಮತ್ತಷ್ಟು ಮಂದಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿವೆ. ಅದನ್ನು ಕೆಲವು ಹಾಲಿ ಶಾಸಕರು ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಮಾಹಿತಿ ಕುಮಾರಸ್ವಾಮಿ ಅವರನ್ನು ನಿದ್ದೆಗೆಡುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಕುಮಾರಸ್ವಾಮಿ ಇದೀಗ ಮತ್ತೊಮ್ಮೆ ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿದ್ದಾರೆ.
ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಅವರ ಮಗಳ ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮ ನವೆಂಬರ್ 19ರಂದು ನಿಗದಿಯಾಗಿದೆ. ಇದರಲ್ಲಿ ಪಾಲ್ಕೊಳ್ಳುವ ನೆಪದಲ್ಲಿ ತಮ್ಮ ಪಕ್ಷದ ಶಾಸಕರನ್ನು ಕುಮಾರಸ್ವಾಮಿ ಚಿಕ್ಕಮಗಳೂರಿಗೆ ಕರೆದೊಯ್ಯುತ್ತಿದ್ದಾರೆ.
ಚಿಕ್ಕಮಗಳೂರಿನ ರೆಸಾರ್ಟ್ನಲ್ಲಿ ಮೂರು ದಿನಗಳ ಕಾಲ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ನವೆಂಬರ್ 17 ರ ಮಧ್ಯಾಹ್ನ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ಗೆ ಶಾಸಕರು ಆಗಮಿಸಲಿದ್ದಾರೆ. ನವೆಂಬರ್ 18 ರಂದು ಶಾಸಕ ಜೊತೆ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ನ.19 ರಂದು ಸಿಲ್ವರ್ ಗೇಟ್ ರೆಸಾರ್ಟ್ನಲ್ಲಿ ನಡೆಯುವ ಶಾಸಕ ಭೋಜೇಗೌಡ ಅವರ ಮಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಲಿದ್ದಾರೆ