ಭಾರತದ 16ನೇ ರಾಷ್ಟ್ರಪತಿಗಳ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.
ನವದೆಹಲಿಯಲ್ಲಿ ಇಂದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಜುಲೈ 18 ರಂದು ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ.
ಜೂನ್ 15 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಸಲು ಈ ತಿಂಗಳ 29 ಕೊನೆಯ ದಿನಾಂಕವಾಗಿರುತ್ತದೆ. ಜುಲೈ 21 ರಂದು ಮತ ಎಣಿಕೆ ನಡೆಯಲಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧಿಕಾರಾವಧಿಯು ಮುಂದಿನ ತಿಂಗಳು 24 ರಂದು ಕೊನೆಗೊಳ್ಳಲಿದೆ.
ಸಂವಿಧಾನದ ಪ್ರಕಾರ ಅನುಪಾತ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ರಹಸ್ಯ ಮತದಾನದ ಮೂಲಕ ಚುನಾವಣೆ ನಡೆಸಲಾಗುವುದು ಎಂದು ಕುಮಾರ್ ಹೇಳಿದರು.
776 ಸಂಸತ್ ಸದಸ್ಯರು ಮತ್ತು 4,033 ವಿಧಾನಸಭಾ ಸದಸ್ಯರು ಸೇರಿದಂತೆ ಒಟ್ಟು 4,809 ಮತದಾರರು ಇರಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದ್ದಾರೆ. ಒಟ್ಟು ಮತಗಳ ಮೌಲ್ಯ 10 ಲಕ್ಷ 86 ಸಾವಿರದ 431.
ಮತದಾನ ಮತ್ತು ಎಣಿಕೆಯ ದಿನದಂದು ಎಲ್ಲಾ ಕೋವಿಡ್ ಮುನ್ನೆಚ್ಚರಿಕೆಗಳು ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುವುದು ಎಂದು ಕುಮಾರ್ ಹೇಳಿದರು. ಚುನಾವಣಾ ಪ್ರಕ್ರಿಯೆಯನ್ನು ಪರಿಸರ ಸ್ನೇಹಿಯಾಗಿಸಲು ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸಲು ಪರಿಸರಸ್ನೇಹಿ ವಸ್ತುಗಳನ್ನು ಬಳಸುವಂತೆ ಚುನಾವಣಾ ಆಯೋಗವು ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ.