ಕಲರ್ಸ್ ‘ಕನ್ನಡತಿ’ (Kannadathi, Colors Kannada) ಮುಗಿದಿದೆ. ಸರಿಗನ್ನಡಂ ಗೆಲ್ಗೆ ಪಾಠಶಾಲೆ ಕದ ಹಾಕಿದೆ. ಧಾರಾವಾಹಿಗಳಲ್ಲಿ ಕನ್ನಡದ ಮುಖವಾಗಿ, ತನ್ಮೂಲಕ ಬರಹಗಾರ್ತಿಯೂ ಆಗಿ, ಒಂದೆರಡು ಪುಸ್ತಕ ಪ್ರಕಟಿಸಿ, ಇನ್ನೇನು ಸಾಹಿತಿಯ ಸ್ಥಾನಕ್ಕೆ ಬಡ್ತಿ ಹೊಂದಬೇಕಿದ್ದ ನಾಯಕಿ ರಂಜನಿ ರಾಘವನ್ (Ranjani Raghavan) ಮುಂದೇನು ಅಂತ ಯೋಚಿಸುತ್ತಿದ್ದಾರಂತೆ. ಇಲ್ಲ, ಇದು ಮುಗಿದುಹೋಗಬಾರದು. ಕನ್ನಡತಿ ಇನ್ನೂ ಮುಂದುವರಿಯಬೇಕು. ಭಾಗ 2 ಬಂದರೂ ಸರಿ ಅಂತ ಅಭಿಮಾನಿಗಳು ಮೇಲಿಂದ ಮೇಲೆ ಆಗ್ರಹಿಸುತ್ತಿದ್ದಾರಂತೆ. ಹೀಗಾಗಿ ಕಲರ್ಸ್ ವಾಹಿನಿಯ ಕನ್ನಡತಿ ಬಾವುಟ ಮತ್ತೆ ಹಾರಲಿದೆ ಎಂಬ ಗಾಳಿಸುದ್ದಿ ಇದೆ.
`ಕನ್ನಡತಿ’ ಒಂದು ಧಾರಾವಾಹಿಯಾಗಿ ತನ್ನ ಛಾಪು ಮೂಡಿಸಿದ್ದು ನಿಜ. ಆದರೆ ಬಲ್ಲವರ ಪ್ರಕಾರ ಅದು ಕನ್ನಡದ ಹೆಸರು ಹೇಳಿಕೊಂಡು ಮನರಂಜನೆ ಮಾರುಕಟ್ಟೆಯಲ್ಲಿ ಮಾರಾಟವಾದ ಇನ್ನೊಂದು ಸರಕು ಮಾತ್ರ. ಭುವಿ ಕನ್ನಡ ಶಿಕ್ಷಕಿ. ಅವಳ ಸಂಭಾಷಣೆಗಳು ಅಚ್ಚಗನ್ನಡದಲ್ಲಿ ಇರುತ್ತಿದ್ದವು ಎಂಬುದನ್ನು ಬಿಟ್ಟರೆ ಕನ್ನಡಕ್ಕೆ ಧಾರಾವಾಹಿಯ ಕೊಡುಗೆ ಅಂಥದ್ದೇನಿಲ್ಲ. ಉಳಿದ ಕಥೆ ಚರ್ವಿತ ಚರ್ವಣ. ಭಾಷೆಯ ಅರಿವಿಲ್ಲದವರ ಬದುಕಿನಲ್ಲಿ ಕನ್ನಡದ ಬೆಳಕು ಹಚ್ಚಿದೆ ಎನ್ನಲಾದ ಸರಿಗನ್ನಡಂ ಗೆಲ್ಗೆಯಲ್ಲಿ ಕೆಲವೊಮ್ಮೆ ಆಭಾಸಗಳೂ, ಅಪ್ರಾಸಂಗಿಕ ವಿಶ್ಲೇಷಣೆಗಳೂ ಹೇರಳವಾಗಿದ್ದವು. ಹಾಗಾಗಿ ಅದೊಂದು ಹೊಸ ಪ್ರಯೋಗವಾಯಿತೇ ವಿನಃ ಕನ್ನಡಕ್ಕಾಗಲಿ ವೀಕ್ಷಕರಿಗಾಗಲಿ ಏನೂ ಪ್ರಯೋಜನವಾಗಲಿಲ್ಲ.
‘ಕನ್ನಡತಿ’ ನಾಯಕಿ ರಂಜನಿ ರಾಘವನ್ ಗೆ ಧಾರಾವಾಹಿ ಮುಂದುವರಿಯಲಿ ಎನ್ನುವ ಆಸೆ ಇದೆ; ನಾಯಕ ಕಿರಣ್ ರಾಜ್ (Kiran Raj) ಗೆ ಅಂಥ ಆಸೆ ಇಲ್ಲವಂತೆ ಎಂಬುದು ಸಧ್ಯದ ಸುದ್ದಿ. ಅಪರೂಪಕ್ಕೆ ಒಂದು ಧಾರಾವಾಹಿ ಜನರು ‘ಛೀ ಥೂ, ಏನು ಎಳಿತಾರಪ್ಪ, ಕಥೆಯೇ ಇಲ್ಲ’ ಎನ್ನುವುದರೊಳಗೆ ಮುಕ್ತಾಯಗೊಂಡಿದ್ದು ಆರೋಗ್ಯಕರ ಬೆಳವಣಿಗೆ. ಹಾಗಾಗಿ ವೀಕ್ಷಕರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಕನ್ನಡತಿ ಭಾಗ 2 ಬೇಕೋ ಬೇಡವೋ ಎಂಬ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಬೇಕಿದೆ!

