ಬೆಂಗಳೂರು,ಆ.16- ಸಮಾಜದಲ್ಲಿ ಶಾಂತಿ ಕದಡಲು ಬಿಜೆಪಿಯವರು ಪ್ರಚೋದನೆ ನೀಡುತ್ತಾರೆ ಮತ್ತೊಂದೆಡೆ ಎಸ್‍ಡಿಪಿಐ, ಪಿಎಫ್‍ಐನಂತಹ ಸಂಘಟನೆಗಳು ಸಾಮರಸ್ಯ ಹಾಳು ಮಾಡುತ್ತವೆ ಎಂದು ಗಂಭೀರ ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸ ಮಾಡುತ್ತಿದ್ದಾರೆ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಸಾಮರಸ್ಯ ಕದಡುತ್ತಿವೆ ಎಂಬ ಆರೋಪಗಳಿವೆ. ಸಾಕ್ಷ್ಯಗಳಿದ್ದರೆ ಕೂಡಲೇ ಆ ಸಂಘಟನೆಗಳನ್ನು ನಿಷೇಧ ಮಾಡಿ ಎಂದು ಸವಾಲು ಹಾಕಿದರು.
ಗದ್ದಲಗಳಿಗೆ ಯಾರು ಕಾರಣ ಎಂಬುದು ಕಣ್ಣೇದುರೇ ಇದೆ. ಮೊದಲು ಬಿಜೆಪಿಯವರು ವೀರ ಸಾರ್ವಕರ್ ಫೋಟೋ ಹಾಕುತ್ತಾರೆ. ಹಾಕಿಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಿಗೆ ಹೋಗಿ ಸಾರ್ವಕರ್ ಫೋಟೋ ಹಾಕುತ್ತಾರೆ. ಜೊತೆಗೆ ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಫ್ಲೆಕ್ಸ್‍ನ್ನು ಹರಿದು ಹಾಕುತ್ತಾರೆ. ಅಲ್ಲಿಗೆ ಗಲಾಟೆಯಾಗುತ್ತದೆ ಎಂದು ಆರೋಪಿಸಿದರು.
ಪದೇ ಪದೇ ಸುಳ್ಳನ್ನೇ ಸಮರ್ಥನೆ ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ಬಿಜೆಪಿ ಮಾಡುತ್ತಿದೆ. ಸಾರ್ವಕರ್ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಎಂಬುದನ್ನು ತೋರಿಸಲಿ. ಅವರು ಸ್ವಾತಂತ್ರ್ಯ ಹೋರಾಟದಲ್ಲೇ ಭಾಗವಹಿಸಿರಲಿಲ್ಲ. ಬಿಜೆಪಿಯವರದು ನಕಲಿ ದೇಶಭಕ್ತಿ ಎಂದು ಕಿಡಿಕಾರಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜವಹಾರ್ ಲಾಲ್ ನೆಹರು ಅವರ ಫೋಟೋ ಹಾಕದೆ ಇವರು ಯಾವ ಸಂದೇಶ ನೀಡುತ್ತಾರೆ. ದೇಶ ವಿಭಜನೆಗೆ ನೆಹರು ಕಾರಣ ಎಂದು ರಾಜ್ಯ ಬಿಜೆಪಿಗರು ಹೇಳುವುದಾದರೆ ಪ್ರಧಾನಿ ನರೇಂದ್ರಮೋದಿ ಕೆಂಪುಕೋಟೆಯಲ್ಲಿ ಭಾಷಣ ಮಾಡುವಾಗ ನೆಹರು ಅವರ ಸ್ವಾತಂತ್ರ್ಯ ಹೋರಾಟದ ಕೊಡುಗೆಯನ್ನು ಸ್ಮರಿಸಿದ್ದೇಕೆ? ಬಿಜೆಪಿಯವರಿಗೆ ಇತಿಹಾಸ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟ ಎಂದರೆ ಏನು ಎಂಬುದು ಗೊತ್ತಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲೂ ಅವರು ಭಾಗವಹಿಸಿಲ್ಲ ಎಂದು ದೂರಿದರು.
Previous Articleಆಕ್ಷನ್ ಮೂಡ್ ನ ವಾಮನ ಟೀಸರ್ ಔಟ್
Next Article ಸಂತೋಷ್ ಗುರೂಜಿ ಹೇಳಿದ್ದು ಹೀಗೆ…?