ಬೆಂಗಳೂರು,ಜು. 4- ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಕರ್ಮಕಾಂಡಕ್ಕೆ ಹಠಾತ್ ತಿರುವು ಸಿಕ್ಕಿದೆ.ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮ್ರಿತ್ ಪೌಲ್ ಅವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದರೊಂದಿಗೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಸಿಐಡಿ ಅಧಿಕಾರಿಗಳು ಐಪಿಎಸ್ ಅಧಿಕಾರಿಯೊಬ್ಬರನ್ನು ಬಂಧಿಸಿದಂತಾಗಿದೆ.
ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಅಮ್ರಿತ್ ಪೌಲ್ ಅವರಿಗೆ ನಾಲ್ಕನೇ ಬಾರಿ ನೋಟಿಸ್ ನೀಡಲಾಗಿತ್ತು. ಸೋಮವಾರ ಬೆಳಿಗ್ಗೆ ವಿಚಾರಣೆಗೆ ಬಂದಿದ್ದ ಅಮ್ರಿತ್ ಪೌಲ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಸುದೀರ್ಘ ವಿಚಾರಣೆ ಬಳಿಕ ಅವರನ್ನು ವಶಕ್ಕೆ ಪಡೆಯಲಾಗಿದೆ.
‘ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಎಡಿಜಿಪಿ ಆಗಿರುವ ಅಮ್ರಿತ್ ಪೌಲ್, ಈ ಹಿಂದೆ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದರು. 545 ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ ಆರೋಪದಡಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು’ ಎಂದು ಸಿಐಡಿ ಮೂಲಗಳು ಹೇಳಿವೆ.
‘ಆರೋಪಿಗಳ ವಿಚಾರಣೆ ವೇಳೆ ದೊರೆತ ಪುರಾವೆಗಳ ಆಧಾರದಲ್ಲಿ ಅಮ್ರಿತ್ ಪೌಲ್ ಅವರನ್ನು ವಿಚಾರಣೆಗೆ ಕರೆಸಲಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ’ ಎಂದೂ ತಿಳಿಸಿವೆ.
Previous Articleಇಬ್ಬರು ಮಕ್ಕಳ ಜೊತೆ ಬಾವಿಗೆ ಹಾರಿದ ತಾಯಿ!!
Next Article ಪ್ಯಾನ್ ಇಂಡಿಯಾ ಸಿನಿಮಾಗೆ ಕ್ಲ್ಯಾಪ್ ಮಾಡಿದ ಸಂದೇಶ್ ನಾಗರಾಜ್