ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿರುವ ಯಾವುದೇ ರಾಜ್ಯಗಳಲ್ಲಿ ಪಕ್ಷದ ಕಾರ್ಯಕರ್ತರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೂಡ ಪಕ್ಷದ ಇಲ್ಲವೇ ಸರ್ಕಾರದ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಅಮಿತ್ ಶಾ ಎಲ್ಲರ ಅಸಮಧಾನ ಶಮನ ಪಡಿಸಿ ಚುನಾವಣೆಗೆ ಸಿದ್ದರಾಗುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.
ಸಂಕಲ್ಪ ಸೇ ಸಿದ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ಅವರುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ಕಟೀಲು ಸೇರಿದಂತೆ ಹಲವು ನಾಯಕರ ಜೊತೆ ಸಭೆ ನಡೆಸಿದರು.
ಈ ವೇಳೆ ಅನೇಕ ರಾಜ್ಯಗಳಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದೆ. ಎಲ್ಲಿಯೂ ಕೂಡ ಪಕ್ಷದ ಇಲ್ಲವೇ ಸರ್ಕಾರದ ವಿರುದ್ಧ ಕಾರ್ಯಕರ್ತರು ತಿರುಗಿ ಬಿದ್ದಿಲ್ಲ.
ಕರ್ನಾಟಕದಲ್ಲಿ ಇಂತಹ ವಾತಾವರಣ ಸೃಷ್ಟಿಯಾಗಿರುವುದು ಬೇಸರದ ಸಂಗತಿ ಎಂದು ಹೇಳಿದರೆನ್ನಲಾಗಿದೆ.
ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಪ್ರಕರಣಗಳಿಂದ ಪಕ್ಷಕ್ಕಾಗುತ್ತಿರುವ ನಕಾರಾತ್ಮಕ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು, ಈ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಕಾರ್ಯಕರ್ತರ ಅಸಮಾಧಾನ ಶಮನಗೊಳಿಸಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಹಿಂದೂಪರ ಸಂಘಟನೆ ಮುಖಂಡರ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಜೊತೆಗೆ ಇತರ ಕೋಮಿನ ರಾಜಕೀಯ ಕಾರಣದ ಹತ್ಯೆಗಳನ್ನೂ ಗಂಭೀರವಾಗಿ ಪರಿಗಣಿಸಬೇಕು, ಯಾವುದೇ ಕಾರಣಕ್ಕೂ ಶಾಂತಿ ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು, ಚುನಾವಣಾ ವರ್ಷದಲ್ಲಿ ಕಾನೂನು ಸುವ್ಯವಸ್ಥೆ ವಿಚಾರ ಬಹಳ ಮುಖ್ಯವಾಗಿರಲಿದೆ ಎಂದು ಕಿವಿಮಾತು ಹೇಳಿದರೆಂದು ಮೂಲಗಳು ತಿಳಿಸಿವೆ.
ಬಿಜೆಪಿಗೆ ಕಾರ್ಯಕರ್ತರೇ ಆಧಾರ ಸ್ತಂಭ. ಮೊದಲ ಬಾರಿಗೆ ಕರ್ನಾಟಕದಲ್ಲಿ ಸ್ವಪಕ್ಷದ ವಿರುದ್ಧವೇ ನಮ್ಮ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಇದು ಸರಿಯಾದ ಬೆಳವಣಿಗೆಯಲ್ಲ. ಕೂಡಲೇ ಕಾರ್ಯಕರ್ತರ ಮನವೊಲಿಸಿ ರಾಜೀನಾಮೆ ಹಿಂಪಡೆಯಲು ಸಂಧಾನ ನಡೆಸಬೇಕೆಂದು ಹೇಳಿದರೆಂದು ಗೊತ್ತಾಗಿದೆ.
ಬಿಜೆಪಿ ಎಂದೆಂದಿಗೂ ಕಾರ್ಯಕರ್ತರನ್ನು ಮರೆಯುವ ಪಕ್ಷವಲ್ಲ. ಕೇವಲ ಎರಡು ಲೋಕಸಭೆ ಕ್ಷೇತ್ರದಿಂದ ಆರಂಭವಾದ ಜೈತ್ರಯಾತ್ರೆ ಇಂದು ಸತತ ಎರಡನೇ ಬಾರಿಗೆ ಅಧಿಕಾರ ಹಿಡಿದಿದ್ದೇವೆ. ರಾಜ್ಯದಲ್ಲೂ ಇದು ಪುನಾರವರ್ತನೆಯಾಗಬೇಕು ಎಂದು ತಾಕೀತು ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ಸೂಕ್ತ ಗೌರವ ಸಿಗಲಿದೆ.
ಮೊದಲು ಮಾಜಿ ಸಿಂಎ ಯಡಿಯೂರಪ್ಪ ಅವರ ಜತೆ 20 ನಿಮಿಷಗಳ ಕಾಲ ಮಾತುಕತೆ ನಡೆಸಿದ ಅಮಿತ್ ಶಾ, ಪಕ್ಷ ಸಂಘಟನೆ, ರಾಜ್ಯ ಪ್ರವಾಸ ಹಾಗೂ ಸಚಿವ ಸಂಪುಟ ವಿಸ್ತರಣೆ ಹಾಗೂ ಇತ್ತೀಚಿನ ಕೆಲವು ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದರು.
ತಮ್ಮ ಪುತ್ರನಿಗೆ ಸೂಕ್ತ ಸ್ಥಾನಮಾನ ನೀಡುವ ವಿಷಯದಲ್ಲಿ ಪಕ್ಷದ ನಾಯಕತ್ವ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಿದೆ ತಾವು ಅದರ ಬಗ್ಗೆ ಯೋಚಿಸದೆ ಪಕ್ಷ ಸಂಘಟನೆಯಲ್ಲಿ ಸಹಕರಿಸುವಂತೆ ಮನವಿ ಮಾಡಿದರೆನ್ನಲಾಗಿದೆ.
ಈ ವೇಳೆ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ತೆರಳುವ ತಮ್ಮ ನಿರ್ಧಾರಕ್ಕೆ ರಾಜ್ಯ ನಾಯಕರು ತೆಗೆದಿರುವ ಅಪಸ್ವರ, ಸುಗಮ ಆಡಳಿತಕ್ಕೆ ತಾವು ನೀಡಿದ ಸಲಹೆಗಳ ತಿರಸ್ಕಾರದ ಬಗ್ಗೆ ಅಮಿತ್ ಶಾ ಅವರ ಗಮನ ಸೆಳೆದರೆನ್ನಲಾಗಿದೆ.
ಪ್ರವಾಸ ಮಾಡಿ:
ಇದಾದ ನಂತರ ಎಲ್ಲಾ ನಾಯಕರ ಜೊತೆ ಮಾತನಾಡಿದ ಅಮಿತ್ ಶಾ ರಾಜ್ಯದ ಎಲ್ಲಾ ನಾಯಕರು ಒಟ್ಟಾಗಿ ಹೋಗಬೇಕು ಯಡಿಯೂರಪ್ಪ ಅವರೊಂದಿಗೆ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಿ ಎಂದು ಸೂಚಿಸಿದರು.
ಯಾವಾಗ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಮಾಡಬೇಕು ಎಂಬುದನ್ನು ಪಕ್ಷ ಸೂಕ್ತ ಕಾಲದಲ್ಲಿ ತೀರ್ಮಾನಿಸುತ್ತದೆ. ಅದರ ಬಗ್ಗೆ ಯಾರೂ ಕೂಡ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಂಘಟನೆ ಹಾಗೂ ರಾಜ್ಯ ಪ್ರವಾಸದ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ