ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕೋರ್ಟ್ ಆದೇಶದಂತೆ ಚುನಾವಣೆ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ಹೊಸದಾಗಿ ರಚನೆಯಾಗಿರುವ 243 ವಾರ್ಡ್‍ಗಳಿಗೆ ಇದೇ 20 ರಂದು ಮೀಸಲಾತಿ ನಿಗದಿಪಡಿಸಲು ತೀರ್ಮಾನಿಸಿದೆ. ಬಿಬಿಎಂಪಿಯ 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪುನರ್ ವಿಂಗಡಿಸಿದ ನಂತರ ವಾರ್ಡ್‍ವಾರು ಮೀಸಲಾತಿ ನಿಗಪಡಿಸಲು ಮುಂದಾಗಿರುವ ಸರ್ಕಾರ ಇದಕ್ಕಾಗಿ ಮಂಗಳವಾರ ನಗರವನ್ನು ಪ್ರತಿನಿಸುವ ಎಲ್ಲಾ ಶಾಸಕರು, ಜಿಲ್ಲಾಧ್ಯಕ್ಷರು ಮತ್ತಿತರ ಪಕ್ಷದ ಹಿರಿಯ ಮುಖಂಡರ ಸಭೆ ನಡೆಸಲಿದೆ.
ಸಭೆಯಲ್ಲಿ ಕೇಳಿಬರುವ ಅಭಿಪ್ರಾಯ ಪಡೆದು 20 ರಂದು ಮೀಸಲು ನಿಗಪಡಿಸಿ ಅಧಿಸೂಚನೆ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
20ರಂದು ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ 15 ದಿನಗಳ ಸಾರ್ವಜನಿಕ ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಿ 22 ರಂದು ನಡೆಯಲಿರುವ ಸುಪ್ರೀಂಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಮಾಡಿಕೊಂಡಿರುವ ತಯಾರಿಗಳ ವಿವರಣೆ ನೀಡಲ ಸರ್ಕಾರ ಮುಂದಾಗಿದೆ.
ಮೀಸಲಾತಿ ನಿಗ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕಾಗಿರುವುದರಿಂದ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ.