ಬೆಂಗಳೂರು,ಜು.21-ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ಹೆಸರನ್ನು ಹೇಳಿಕೊಂಡು ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದು . ಈಗ ನಮಗೆ ಅದರ ಋಣ ತೀರಿಸುವ ಸಮಯ ಬಂದಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.
ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಸಮನ್ಸ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ದೇಶ ಉಳಿಯಬೇಕು ಎಂದರೆ ಕಾಂಗ್ರೆಸ್ ಉಳಿಯಬೇಕು ಎಂದರು.
ಎಲ್ಲಾ ಸಣ್ಣ ವಿಚಾರವನ್ನು ಬದಿಗಿಟ್ಟು ಒಗ್ಗಟ್ಟಿನ ಹೋರಾಟ ನಡೆಸಿ ಸೋನಿಯಾ ಗಾಂಧಿಗೆ ನೈತಿಕವಾಗಿ ಸಮಾಧಾನವಾಗುವಂತೆ ನಡೆದುಕೊಂಡರೆ ಮಾತ್ರ ನಾವು ತಿನ್ನುವ 2 ಹೊತ್ತಿನ ಊಟ ಸಾರ್ಥಕ ಆಗುತ್ತದೆ. ನೆಹರು, ಇಂದಿರಾ, ಸೋನಿಯಾ ಹೆಸರಲ್ಲಿ 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಕಿಂಚಿತ್ತು ತ್ಯಾಗಕ್ಕೂ ನಾವು ತಯಾರಾಗದೇ ಹೋದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದರು.
ಸೋನಿಯಾ ಗಾಂಧಿಗೆ ಇಡಿ ಸಮನ್ಸ್ ನೀಡಿದೆ. ಕಾಂಗ್ರೆಸ್ ಇಡೀ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಆದರೆ ಸೋನಿಯಾ ಗಾಂಧಿ ಕಾನೂನಿಗಿಂತ ದೊಡ್ಡವರಾ ಎಂದು ಕೆಲವರು ಪ್ರಶ್ನೆ ಎತ್ತುತ್ತಿದ್ದಾರೆ. ಇದಕ್ಕೆ ಮೊದಲು ಉತ್ತರಿಸುತ್ತೇನೆ ಎಂದ ಅವರು, ನಿಮ್ಮ ಪೂರ್ವಿಕರು ಆರ್‌ಎಸ್‍ಎಸ್‍ನವರು, ಹಿಂದೂ ಮಹಾಸಭಾದವ್ರು, ಜನಸಂಘದವ್ರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದರಾ ಎಂದು ಪ್ರಶ್ನಿಸಿದರು.
ಇಂದಿರಾಗಾಂಧಿ ಬಗ್ಗೆ ಮಾತಾಡುತ್ತಿದ್ದಾಗ ಗುಸುಗುಸು ಅನ್ನುತ್ತಿದ್ದ ಮುಖಂಡರನ್ನು ಗಮನಿಸಿ ಭಾಷಣ ಮಾಡುತ್ತಿರುವಾಗಲೇ ರಮೇಶ್ ಕುಮಾರ್ ಹೋಗ್ರಿ ಆ ಕಡೆ ಎಂದು ರೇಗಾಡಿದ್ದಾರೆ. ನೀವು ಮಾತಾಡೋದಾದರೆ ನಮ್ಮನ್ನೆಕೆ ಕರೆಯುತ್ತೀರಿ ಅವಿವೇಕಿಗಳು ಎಂದು ತರಾಟೆಗೆ ತೆಗೆದುಕೊಂಡರು.