ಬೆಂಗಳೂರು,ಆ.17-ವಯಸ್ಸಿನ ಅಂತರದಿಂದ ವಿವಾಹವಾದ ಪತ್ನಿಯ ಕಿರುಕುಳ ತಾಳಲಾರದೇ ಆಕೆಯನ್ನು ಸಿನಿಮೀಯ ಶೈಲಿಯಲ್ಲಿ ಕೊಲೆ ಮಾಡಿ ತಾನೇ ಠಾಣೆಗೆ ದೂರು ನೀಡಿದ ಪತಿಯ ಕೃತ್ಯವು ಮಡಿವಾಳ ಪೊಲೀಸರ ತನಿಖೆಯಿಂದ ಬಯಲಾಗಿದೆ.
ಕಿರುಕುಳ ನೀಡುತ್ತಿದ್ದ ಪತ್ನಿಯ ಕೊಲೆ ಮಾಡಿ ಮರೆ ಮಾಚಲು ಮಡಿವಾಳ ಠಾಣೆಗೆ ದೂರು ನೀಡಿದ ಪತಿ ಪೃಥ್ವಿರಾಜ್(48) ನನ್ನು ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಖತರ್ನಾಕ್ ಸಂಚಿನ ಬಗ್ಗೆ ಬಾಯ್ಬಿಟ್ಟಿದ್ದು ಆತನನ್ನು ಬಂಧಿಸಿ ಕೊಲೆಗೆ ಸಹಕರಿಸಿ ಪರಾರಿಯಾಗಿರುವ ಆತನ ಸ್ನೇಹಿತ ಬಿಹಾರ ಮೂಲದ ಸಮೀರ್ ಕುಮಾರ್ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಸಿ.ಕೆ.ಬಾಬಾ ಅವರು ತಿಳಿಸಿದ್ದಾರೆ.
ಮಡಿವಾಳದಲ್ಲಿ ಎಲೆಕ್ಟ್ರಾನಿಕ್ ಅಪ್ಲೈಯನನ್ಸ್ ಅಂಗಡಿ ನಡೆಸುತ್ತಾ ಕಳೆದ 13 ವರ್ಷಗಳಿಂದ ನಗರದಲ್ಲೇ ನೆಲೆಸಿದ್ದ ಬಿಹಾರ ಮೂಲದ ಪೃಥ್ವಿರಾಜ್, ಜ್ಯೋತಿ ಕುಮಾರಿ(38) ಯನ್ನು 8 ತಿಂಗಳ ಹಿಂದೆ ಮದುವೆಯಾಗಿದ್ದು ಕೆಲ ದಿನಗಳ ಬಳಿಕ ನಿರಂತರ ದಂಪತಿ ನಡುವೆ ಜಗಳ ನಡೆಯುತ್ತಿತ್ತು, ಇದರ ಮಧ್ಯೆ ಪತ್ನಿಗೆ ಮತ್ತೊಬ್ಬ ಯುವಕನ ಜೊತೆ ಸಲುಗೆಯಿತ್ತು, ಈ ವಿಚಾರದಲ್ಲಿ ಪತ್ನಿಯು ಕಿರುಕುಳ ನೀಡುತ್ತಿದ್ದಳು.
ಇದನ್ನು ತಾಳಲಾರದೇ ಬೇಸತ್ತು ಮುಕ್ತಿ ಪಡೆಯಲು ಆಕೆಯನ್ನು ಕೊಲೆಮಾಡಲು ಪೃಥ್ವಿರಾಜ್ ಮುಂದಾಗಿ ಸಂಚು ರೂಪಿಸಿದ್ದನು.
ಅದರಂತೆ ಪೃಥ್ವಿರಾಜ್ ತನ್ನ ಹಾಗು ಪತ್ನಿಯ ಮೊಬೈಲ್ ಗಳನ್ನು ಮನೆಯಲ್ಲಿಯೇ ಇರಿಸಿ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಮುಂದಾಗಿ ಕಳೆದ ಆಗಸ್ಟ್ 2 ರಂದು ಪತ್ನಿಯನ್ನು ಉಡುಪಿಯ ಮಲ್ಪೆ ಬೀಚ್‌ಗೆ ಜೂಮ್ ಕಾರ್ ಬಾಡಿಗೆ ಪಡೆದು ಸ್ನೇಹಿತ ಸಮೀರ್ ಕುಮಾರ್ ಸೇರಿ ಮೂವರು ಹೋಗಿದ್ದಾರೆ.
ಬೀಚ್ ಬಳಿ ಕರೆದುಕೊಂಡು ಹೋಗಿ, ಅಲ್ಲಿ ಸಮುದ್ರದಲ್ಲಿ ಮುಳುಗಿಸಿ ಜ್ಯೋತಿ ಕುಮಾರಿ ಕೊಲೆ ಮಾಡಿ ಅದನ್ನು ಸ್ವಾಭಾವಿಕ ಸಾವು ಎಂದು ಬಿಂಬಿಸುವ ಯೋಜನೆಯನ್ನು ಪೃಥ್ವಿರಾಜ್ ಮಾಡಿದ್ದ.
ಆದರೆ ಸಮುದ್ರದ ಆಳಕ್ಕೆ ಇಳಿಯದಂತೆ ಬೋರ್ಡ್ ಹಾಕಿದ್ದರಿಂದ ಆತನ ಸಂಚು ವಿಫಲವಾಗಿದ್ದರಿಂದ ಮತ್ತೊಂದು ಸಂಚು ಮಾಡಿ, ಜ್ಯೋತಿಯನ್ನು ಸಕಲೇಶಪುರದ ಗುಂಡ್ಯ ಬಳಿ ಕರೆದುಕೊಂಡು ಹೋಗಿ ಕಾರಿನಲ್ಲಿಯೇ ಆಕೆಯನ್ನು ವೇಲ್‌ನಿಂದ ಉಸಿರುಗಟ್ಟಿಸಿ ಕೊಲೆಗೈದು ಶವವನ್ನು ಅಲ್ಲಿಯೇ ಪೊದೆಯೊಂದರಲ್ಲಿ ಎಸೆದಿದ್ದ.
ಎಲ್ಲಾ ಮುಗಿಸಿಕೊಂಡು ಮನೆಗೆ ವಾಪಾಸ್ ಬಂದ ಪೃಥ್ವಿರಾಜ್, ಮಡಿವಾಳ ಪೊಲೀಸ್ ಠಾಣೆಯಲ್ಲಿ ಕಳೆದ ಆ.5 ರಂದು ಪತ್ನಿ ನಾಪತ್ತೆ ಎಂದು ದೂರು ನೀಡಿದ್ದಾನೆ.
ದೂರು ಪಡೆದ ಪೊಲೀಸರು ತನಿಖೆ ಕೈಗೊಂಡಾಗ ಅವರಿಬ್ಬರ ಫೋನ್‌ಗಳು ಮನೆಯಲ್ಲಿಯೇ ಇದ್ದ ಬಗ್ಗೆ ತಿಳಿದು ಅನುಮಾನಗೊಂಡು ಸಿಸಿಟಿವಿ ಹಾಗು ಸಿಡಿಆರ್ ಆಧರಿಸಿ ಪೃಥ್ವಿರಾಜ್‌ನನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಕೊಲೆ ಹಿಂದಿನ ರಹಸ್ಯವನ್ನು ಬಾಯ್ಬಿಟ್ಟ ಪೃಥ್ವಿರಾಜ್ ಪತ್ನಿ ಬಹಳ ಕಿರಿಕಿರಿ ಅನುಭವಿಸಿದ್ದೇನೆ. ಆಕೆ ಇನ್ನೊಬ್ಬ ಗೆಳೆಯನನ್ನು ಹೊಂದಿದ್ದಳು. 2 ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದ ಆಕೆ ತರಬೇತಿಗಾಗಿ ದೆಹಲಿಗೆ ಹೋಗಿದ್ದಾಗ ಅಲ್ಲಿ ಯುವಕನೊಬ್ಬನ ಸಖ್ಯ ಬೆಳೆಸಿದ್ದಳು. ಇದೆಲ್ಲವುಗಳಿಂದ ಬೇಸತ್ತು ಆಕೆಯನ್ನು ಸಂಚು ರೂಪಿಸಿ ಕೊಲೆ ಮಾಡಿದ್ದೆ ಎಂದು ತಿಳಿಸಿದ್ದಾನೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಬಾಬಾ ತಿಳಿಸಿದರು.
Previous Articleವಸತಿಗೃಹದಲ್ಲಿ ಕೊಳೆತ ಸ್ಥಿತಿಯಲ್ಲಿ ಆರು ಮಂದಿಯ ಶವ
Next Article ರಾ ರಾ ರಕ್ಕಮ್ಮ ಜೈಲಿಗೆ ಹೋಗ್ತಾರಾ?