ಬೆಂಗಳೂರು, ಜು.,6- ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿಯ ಮೊಹಮ್ಮದ್ ಹರ್ಸಲಾಂ, ಮೊಹಮ್ಮದ್ ನದೀಂ, ಸಚಿಂದರ್ನ್, ಮೋಸಿನ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 8 ಗ್ರಾಂ ಎಂಡಿಎಂಎ, ನಾಲ್ಕು ಮೊಬೈಲ್ ಗಳು ಹಾಗು ಬ್ಯಾಂಕ್ ಖಾತೆಯಲ್ಲಿದ್ದ 6 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳು ಆನ್ ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದು ಆನ್ಲೈನ್ನಲ್ಲೇ ವಿದೇಶದಿಂದ ಡ್ರಗ್ಸ್ ಖರೀದಿಸುತ್ತಿದ್ದರು.
ಬಂಧಿತರು ಕೋಡ್ ವರ್ಡ್ ಬಳಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಡ್ರಗ್ಸ್ ಬೇಕಾದವರಿಂದ ಮೊದಲೇ ಆನ್ಲೈನ್ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದರು. ಹಣ ಬಂದ ಬಳಿಕ ನಂತರ ರಸ್ತೆ ಬದಿಯಲ್ಲಿ ಡ್ರಗ್ಸ್ ಖದೀಮರು ನಿಲ್ಲುತ್ತಿದ್ದರು. ಚಾಕಲೇಟ್ ಪ್ಯಾಕೆಟ್ನಲ್ಲಿ ಹಾಕಿ ಹಣ ನೀಡಿದವರಿಗೆ ವಾಟ್ಸಾಪ್ನಲ್ಲಿ ಫೋಟೋ ಮತ್ತು ಲೊಕೇಷನ್ ಕಳಿಸುತ್ತಿದ್ದರು.
ಆರೋಪಿಗಳು ಹಲವು ದಿನಗಳಿಂದ ಇದೇ ರೀತಿ ಮಾಡಿ ಹಣಗಳಿಸುತ್ತಿದ್ದಾರೆ. ಕೆಆರ್ ಪುರಂ, ಆವಲಹಳ್ಳಿ ಮತ್ತು ಹೊಸಕೋಟೆ ಸುತ್ತಮುತ್ತಲಿನ ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.