ಬೆಂಗಳೂರು: ರಾಜ್ಯ ರಾಜಧಾನಿಯಲ್ಲೇ ಕನ್ನಡಿಗರ ಶೋಷಣೆ ನಡೆಯುತ್ತಿದ್ದು, ಅಪಾರ್ಟ್‌ಮೆಂಟ್ ಸುತ್ತಲಿನ ಪ್ರದೇಶಗಳಲ್ಲಿ ಕನ್ನಡಿಗರನ್ನು ಶೋಷಿಸಲಾಗುತ್ತಿದೆ ಎಂಬ ಮಾತು ವ್ಯಾಪಕವಾಗಿದೆ.
ಅಪಾರ್ಟ್‌ಮೆಂಟ್ ನಿವಾಸಿಗಳು ಸುತ್ತಲಿನ ಎಲ್ಲ ಪ್ರದೇಶವೂ ತಮ್ಮದೇ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಜೆ.ಪಿ. ನಗರ ಸಮೀಪದ ಪುಟ್ಟೇನಹಳ್ಳಿಯ ಎಲಿಟಾ ಪ್ರಾಮಿನೇಡ್ ಅಪಾರ್ಟ್‌ಮೆಂಟ್ ಹೊರಗೆ ಹಾಲಿನ ಬೂತ್ ಆರಂಭಿಸಲು ಇನ್ನಿಲ್ಲದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಕನ್ನಡಿಗನಿಗೆ ಕಿರುಕುಳ ನೀಡಲಾಗುತ್ತಿದೆ. ಹಾಲಿನ ಬೂತ್‌ನಿಂದ ಬರುವ ದುರ್ವಾಸನೆಯನ್ನು ಸಹಿಸಲಾಗುವುದಿಲ್ಲ ಎಂಬ ನೆಪಗಳನ್ನು ಹೇಳಿ ಹಾಲಿನ ಕೇಂದ್ರ ಆರಂಭಕ್ಕೆ ಅಪಾರ್ಟ್‌ಮೆಂಟ್ ನಿವಾಸಿಗಳು ಅಡ್ಡಿಪಡಿಸುತ್ತಿದ್ದಾರೆ. ಇದಲ್ಲದೆ, ಮಂತ್ರಿಯೂ ಸೇರಿದಂತೆ ಪ್ರಭಾವಿಗಳಿಂದ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎಂದು ದೂರಲಾಗಿದೆ.
ಹಾಲಿನ ಕೇಂದ್ರ ತೆರೆಯಲುದ್ದೇಶಿಸಿರುವ ಸ್ಥಳ ಅಪಾರ್ಟ್‌ಮೆಂಟ್‌ಗೆ ಸೇರಿದ್ದೇನೂ ಅಲ್ಲ. ಆದರೂ ಅಪಾರ್ಟ್‌ಮೆಂಟ್ ನಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಅಚ್ಚರಿಯ ವಿಷಯವಾಗಿದೆ.
ಅಷ್ಟಕ್ಕೂ ನಗರದ ಹಲವೆಡೆ ಇರುವ ಯಾವುದೇ ಹಾಲಿನ ಕೇಂದ್ರವೂ ದುರ್ವಾಸನೆ ಬೀರುತ್ತಿಲ್ಲ. ಅಲ್ಲದೆ, ಹಾಲಿನ ಕೇಂದ್ರವೇ ಇನ್ನೂ ಆರಂಭವಾಗಿಲ್ಲ. ಆಗಲೇ ಹಾಲಿನ ಕೇಂದ್ರದಿಂದ ದುರ್ವಾಸನೆ ಬರುತ್ತದೆ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ದೂರುತ್ತಿರುವುದು ಪೂರ್ವಾಗ್ರಹವೇ ಆಗಿದೆ ಎಂಬ ಮಾತು ಕೇಳಿಬಂದಿದೆ.
ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕುಡಿಯಲು ಹಾಲು ಬೇಕು. ಕಾಫಿ ಟೀ ಬೇಕು. ತಿನ್ನಲು ಮೊಸರು, ಬೆಣ್ಣೆ, ತುಪ್ಪ ಬೇಕು. ಆದರೆ ಅಪಾರ್ಟ್‌ಮೆಂಟ್ ಬಳಿ ಮಾತ್ರ ಹಾಲಿನ ಕೇಂದ್ರ ಬೇಡ ಎನ್ನುತ್ತಿರುವುದು ಸರಿಯೇ? ಹಸುವಿನ ಹಾಲು ಬೇಕು, ಆದರೆ ಹಸುವಿನ ಸಹವಾಸವೇ ಬೇಡ ಎನ್ನುವ ಅಪಾರ್ಟ್‌ಮೆಂಟ್ ನಿವಾಸಿಗಳ ವಾದ ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ.
ಗೋವು ಕಾಮಧೇನು, ಪವಿತ್ರ ಎಂದೆಲ್ಲ ಹೇಳುತ್ತಿರುವ ಬಿಜೆಪಿ ಹಾಗು ಬಿಜೆಪಿ ನೇತೃತ್ವದ ಸರ್ಕಾರವಿರುವ ಕರ್ನಾಟಕದಲ್ಲಿ ಹಾಲಿನ ಕೇಂದ್ರ ಆರಂಭಕ್ಕೂ ಹತ್ತಾರು ಅಡ್ಡಿ, ಆತಂಕಗಳು ಎದುರಾಗುತ್ತಿರುವುದು ವಿಪರ್ಯಾಸವೇ ಸರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Previous Article90 ಲಕ್ಷ ಮೌಲ್ಯದ ಡ್ರಗ್ಸ್ ವಶ..
Next Article ಗಾರ್ಗಿ: ಹೆಣ್ಣೊಬ್ಬಳ ಹೋರಾಟದ ಕಥೆ!