ಬೆಂಗಳೂರು, ಆ.11- ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಸರಿನಲ್ಲಿ ಹೈಕೋರ್ಟ್ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮುಖ್ಯ ನ್ಯಾಯಮೂರ್ತಿಯ ಹೆಸರಲ್ಲಿ ಅಧಿಕಾರಿಯ ವಾಟ್ಸಾಪ್ಗೆ 10 ಸಾವಿರ ಮೌಲ್ಯದ ಒಟ್ಟು 9 ಅಮೆಜಾನ್ ಗಿಫ್ಟ್ ವೋಚರ್ ಕಳಿಸಿ ವಂಚನೆ ಮಾಡಲಾಗಿದೆ.
ಕಳೆದ ಆ.6ರ ಬೆಳಗ್ಗೆ 7.30ಕ್ಕೆ ಅಧಿಕಾರಿಯ ವಾಟ್ಸಾಪ್ಗೆ ಸಂದೇಶ ರವಾನೆ ಮಾಡಲಾಗಿದೆ. ಈ ಬಗ್ಗೆ ನಗರದ ಸೈಬರ್ ಕ್ರೈಂ ಠಾಣೆಗೆ ಪಿಆರ್ಒ ದೂರು ನೀಡಿದ್ದು, ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ.
ಗವರ್ನರ್ ಹೆಸರಲ್ಲೂ ವಂಚನೆ:
ವಿವಿ ಸಿಂಡಿಕೇಟ್ ಸದಸ್ಯ ಮಾಡುವುದಾಗಿ ನಂಬಿಸಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಹೆಸರಿನಲ್ಲಿ ವಂಚನೆ ಮಾಡಿದ್ದ, ಬಳ್ಳಾರಿ ಮೂಲದ ಸದರುಲ್ಲಾ ಖಾನ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗವರ್ನರ್ ಅಧೀನ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದು, ಎಲ್ಲಾ ವಿವಿಗಳಿಗೆ ಸೆನೆಟ್ ಸದಸ್ಯ ಎಂದು ಆಸಾಮಿ ಹೇಳಿಕೊಂಡಿದ್ದ. ನಕಲಿ ಗುರುತಿನ ಚೀಟಿ ಮಾಡಿಕೊಂಡು ಆರೋಪಿ ಓಡಾಡುತ್ತಿದ್ದ. ಇನ್ನೂ ರಾಜ್ಯಪಾಲರ ಹೆಸರು ಹೇಳಿದರೆ ಜನ ಬೇಗ ನಂಬುತ್ತಾರೆ. ರಾಜ್ಯಪಾಲರ ಕಚೇರಿ ಹೆಸರು ಬಳಸಿಕೊಂಡು ವಂಚಿಸುತ್ತಿದ್ದ ವಿಚಾರ ತಿಳಿದು ರಾಜ್ಯಪಾಲರ ಕಚೇರಿ ಸಿಬ್ಬಂದಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಯಾರು ತನ್ನ ಮೇಲೆ ಅನುಮಾನ ಪಡುವುದಿಲ್ಲ ಎಂದು ರಾಜ್ಯಪಾಲರ ಹೆಸರು ಬಳಕೆ ಮಾಡಿದ್ದು, ಗವರ್ನರ್ ಕಚೇರಿಯಿಂದ ಎಂದು ಕೆಲವು ಗಣ್ಯ ವ್ಯಕ್ತಿಗಳಿಗೂ ಕರೆ ಮಾಡಿರುವುದು ಬೆಳಕಿಗೆ ಬಂದಿದೆ. ನಿಮ್ಮವರನ್ನ ಸಿಂಡಿಕೇಟ್ ಸದಸ್ಯರಾಗಿ ಮಾಡುತ್ತೇನೆ ಎಂದು ಆರೋಪಿ ಕರೆ ಮಾಡಿದ್ದ. ಈ ಬಗ್ಗೆ ಆರೋಪಿ ಸದರುಲ್ಲಾ ಖಾನ್ ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.