ಬೆಂಗಳೂರು,ಜು.27-ಸಿಸಿಬಿ ಪೊಲೀಸರು ಬಂಧಿಸಿರುವ ಇಬ್ಬರು ಶಂಕಿತ ಉಗ್ರರು ಕುರಾನ್ ಗ್ರಂಥವನ್ನೇ ತಿರುಚಿ ಯುವಕರನ್ನು ಉಗ್ರ ಸಂಘಟನೆಗೆ ಸೇರಲು ಪ್ರಚೋದನೆಗೆ ಒಳಗಾಗುವಂತೆ ಮಾಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಧರ್ಮಗ್ರಂಥಗಳ ಬಗ್ಗೆ ಅರಿವಿರದ ಯುವಕರಿಗೆ ಕುರಾನ್‍ನ ತಿರುಚಿದ ಪ್ರತಿ ನೀಡಿ ಇವರಿಬ್ಬರೂ ಪ್ರಚೋದನೆ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಬಂಧಿತ ಇಬ್ಬರು ಆರೋಪಿಗಳ ಬಳಿ ತಿರುಚಿದ ಕುರಾನ್‍ನ ಕೆಲ ಪೇಜ್‍ಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವು ಅಲ್ಖೈದಾ ಉಗ್ರಗಾಮಿ ಸಂಘಟನೆಗೆ ಯುವಕರನ್ನು ನೇಮಿಸಿಕೊಳ್ಳುವ ವ್ಯಕ್ತಿ ಕಳಿಸಿದ್ದ ದಾಖಲೆಗಳಾಗಿವೆ.
ಅಲ್ ಖೈದಾಗೆ ಸೇರ್ಪಡೆ ಮಾಡುವಾಗ ಕಳುಹಿಸಿರುವ ದಾಖಲೆಗಳಿದ್ದು, ಜಿಹಾದ್, ಕೊಲ್ಲುವುದು, ಷರಿಯತ್ ಕಾನೂನು ಎಲ್ಲವನ್ನು ಸೇರಿಸಲಾಗಿದೆ.
ತಪ್ಪಾಗಿ ವ್ಯಾಖ್ಯಾನಿಸಿದ ಕುರಾನ್‍ನ ದಾಖಲೆಯಲ್ಲಿ ಜಿಹಾದ್ ಬಗ್ಗೆ ವಿವರ, ಕೊಲ್ಲುವುದು, ಷರಿಯಾ ಕಾನೂನಿನ ವಿವರಗಳಿವೆ.
ಕುರಾನ್ಗೆ ಅನುಗುಣವಾಗಿಯೇ ನಾವು ಬದುಕಬೇಕು ಎಂದೆಲ್ಲಾ ಅದರಲ್ಲಿ ವಿವರಗಳಿದ್ದವು ಪವಿತ್ರ ಗ್ರಂಥವನ್ನು ತಿರುಚಿದನ್ನೇ ಕುರಾನ್ ಎಂದು ನಂಬಿರುವ ಶಂಕಿತರು, ಕುರಾನ್ ಅನ್ವಯವಾಗಿ ಬದುಕಬೇಕು. ಅಲ್ಲಾನಿಗೋಸ್ಕರ ಜಿಹಾದ್ ಮಾಡಬೇಕು ಎಂಬುದನ್ನು ನಂಬಿದ್ದಾರೆ. ಇದರ ಪ್ರಭಾವಕ್ಕೆ ಒಳಗಾಗಿ ಅಲ್ ಖೈದಾ ಸೇರಬೇಕು ಎಂಬುದು ನೇಮಕಾತಿ ಮಾಡಿಕೊಂಡಿದ್ದವನ ಸಂಚಾಗಿತ್ತು ಎಂಬ ಸತ್ಯ ಬಯಲಾಗಿದೆ.
ಈ ನಡುವೆ ಬಂಧಿತ ಶಂಕಿತ ಉಗ್ರರ ಬಳಿ ವಶಪಡಿಸಿಕೊಂಡ ಮೊಬೈಲ್ ರಿಟ್ರೀವ್ ಮಾಡಲು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್)ಗೆ ರವಾನಿಸಲಾಗಿದೆ. ಹಳೆಯ ಮೊಬೈಲ್ ಆದ ಕಾರಣ ರಿಟ್ರೀವ್ ಆಗದೆ ಮಾಹಿತಿ ಪತ್ತೆ ಆಗುತ್ತಿಲ್ಲ. ಹೀಗಾಗಿ ವಿಚಾರಣೆಗೆ ಅಡ್ಡಿಯುಂಟಾಗಿದೆ.
ಇಬ್ಬರು ಶಂಕಿತರು ದೇಶಾದ್ಯಂತ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸುವವರ ಜೊತೆಗೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಸಿಸಿಬಿಯ ಪ್ರಕರಣವನ್ನು ಎನ್‍ಐಎಗೆ ವಹಿಸುವಂತೆ ಕೇಂದ್ರ ಗೃಹ ಇಲಾಖೆಗೆ ರಾಜ್ಯ ಪೊಲೀಸರು ಪತ್ರ ಬರೆದಿದ್ದಾರೆ.
Previous Articleಹತ್ಯೆ ಮಾಡುವುದು, ರಕ್ತ ಹರಿಸುವುದು ಸರಿಯಲ್ಲ : CM ಬೊಮ್ಮಾಯಿ
Next Article ನಾಲೆಗೆ ಹಾರಿದ ವಿದ್ಯಾರ್ಥಿನಿಯರು