ಬೆಂಗಳೂರು,ಆ.25-ನಗರದಲ್ಲಿ ಗಣೇಶೋತ್ಸವ ಆಚರಣೆಯ ಮಾರ್ಗಸೂಚಿ ಹಾಗು ಭದ್ರತೆ ವಿಚಾರವಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಇಂದು ಸಾರ್ವಜನಿಕ ಶಾಂತಿ ಸೌಹಾರ್ದ ಸಭೆ ನಡೆಸಲಾಯಿತು.
ಪುರಭವನದಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಡಿಸಿಪಿಗಳು ಜೊತೆಗೆ ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದ್ದು ಸಭೆ ತಡವಾಗಿ ನಡೆಸಿದ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಎರಡು ದಿನ ಮೊದಲು ಮಾರ್ಗಸೂಚಿ ಹೇಳುತ್ತೀರಾ…? ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪನೆ ಮಾಡಿ ಎನ್ನುತ್ತೀರಾ ಅದನ್ನು ತಯಾರಿಕಾ ಘಟಕಕ್ಕೆ ಹೇಳಬೇಕು ಸಾರ್ವಜನಿಕರಿಗಲ್ಲ ಎಂದರು.
ವಿದ್ಯುತ್ ತಂತಿಗಳ ಬಗ್ಗೆ ಹೇಳಿದ್ದೀರಿ. ಆದರೆ ಈಗಲೂ ಕೆಲವೆಡೆ ಕೈಗೆಟಕುವ ತಂತಿಗಳು ಸಿಗುತ್ತದೆ. ಅದನ್ನು ಮೊದಲು ಬೆಸ್ಕಾಂ ಅಧಿಕಾರಿಗಳು ಸರಿಪಡಿಸಬೇಕು. ಅನೇಕರು ಮನೆಗಳಲ್ಲಿ ಗಣೇಶ ಮೂರ್ತಿ ಇಟ್ಟು ಪೂಜಿಸುತ್ತಾರೆ. ಮೂರ್ತಿ ವಿಸರ್ಜನೆಗೆ ದೂರ ಹೋಗಲು ಸಾಧ್ಯವಿಲ್ಲ, ಕನಿಷ್ಠ 2-3 ಏರಿಯಾಗೆ ಒಂದು ಕಡೆ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟರೆ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಗಣೇಶ ಹಬ್ಬಕ್ಕೆ ಮೂರು ದಿನ ಮೊದಲು ನಿಬಂಧನೆಗಳನ್ನು ಹೇಳಬೇಡಿ, ಅನೇಕ ಕಡೆಗಳಲ್ಲಿ ಚಿಕ್ಕ ಮಕ್ಕಳು ಗಣೇಶ ಕೂರಿಸುತ್ತಾರೆ ಅವರಿಗೆ ಗೊತ್ತಿರಲ್ಲ. ಬಂದು ಅನುಮತಿ ಕೇಳಿದರೂ ನೀವು ಅನುಮತಿ ಕೊಡುವುದಿಲ್ಲ. ಬಿಬಿಎಂಪಿ, ಬೆಸ್ಕಾಂನವರು ಮೊದಲು ಕೆಲಸ ಮಾಡಿ ಆಮೇಲೆ ನಿಬಂಧನೆಗಳನ್ನು ಕೊಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಂತಿಸಭೆ ಮಾಡುವುದು ಒಳ್ಳೆ ವಿಷಯ. ಗಣೇಶನ ಪೂಜೆಯ ವೇಳೆ ಆಜಾನ್ ಕೂಗಿದರೆ ಅದನ್ನು ಲಾಭ ಮಾಡಿಕೊಂಡು ಕಿಡಿಗೇಡಿಗಳಿಂದ ಗಲಭೆ ನಡೆಸುವ ಸಾಧ್ಯತೆಯಿದ್ದು ಎಚ್ಚರಿಕೆ ವಹಿಸಲು ಸಲಹೆ ನೀಡಲಾಯಿತು.
ಎಲ್ಲರೂ ಗಲಾಟೆ ಮಾಡುವುದಿಲ್ಲ, ಕೆಲ ಕಿಡಿಗೇಡಿಗಳಿಂದ ಶಾಂತಿ ಕದಡುವ ಕೆಲಸವಾಗಲಿದೆ. ನಮ್ಮ ಸಮುದಾಯದಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಆದರೂ ನಮ್ಮನ್ನು ಗುರಿ ಮಾಡಲಾಗುತ್ತಿದ್ದು ಇದನ್ನು ತಪ್ಪಿಸುವಂತೆ ಮುಸ್ಲಿಂ ಮುಖಂಡರು ಮನವಿ ಮಾಡಿದರು.
ಗಣೇಶನ ಮೆರವಣಿಗೆ ವೇಳೆ ಶಾಂತಿ ಕಾಪಾಡಲು ನಾವು ಸಿದ್ದ ಎಂದು ಮುಸ್ಲಿಂ ಮುಖಂಡರು ಭರವಸೆ ನೀಡಿದರು.
ಗಣೇಶನ ಪ್ರತಿಷ್ಠಾಪನೆ ವೇಳೆ ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗು ಅಗ್ನಿಶಾಮಕ ಇಲಾಖೆಯಿಂದ ಎನ್ ಓಸಿ ತೆಗೆದುಕೊಂಡು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್, ಬೆಸ್ಕಾಂ, ಮಾಲಿನ್ಯ ಮಂಡಳಿ, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು, ಹಿಂದೂ ಮುಖಂಡರು, ಮುಸ್ಲಿಂ ಮುಖಂಡರು ಹಾಗು ಕ್ರೈಸ್ತ ಸಮುದಾಯದ ಮುಖಂಡರು ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.
Previous ArticleDrugs ಮಾರುತ್ತಿದ್ದ ನೈಜಿರಿಯಾ ಪ್ರಜೆಗಳು..!!
Next Article ED ಅಧಿಕಾರಿಗಳ ಹೆಸರಿನಲ್ಲಿ ಲೂಟಿ