ಬೆಂಗಳೂರು,ಜು.22-ಆಗ್ನೇಯ ವಿಭಾಗದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಗಳನ್ನು ಕಳವು ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಕುಖ್ಯಾತ ಬೈಕ್ ಕಳ್ಳರ ಗ್ಯಾಂಗ್ ನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ನೆಡುಚೆಲಿಯನ್, ತಿರುಪತಿ ಹಾಗು ವಲ್ಲರಸು ಬಂಧಿತ ಗ್ಯಾಂಗ್ ನ ಆರೋಪಿಗಳಾಗಿದ್ದು ಅವರಿಂದ 20ಲಕ್ಷ ಮೌಲ್ಯದ 26 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರರಾವ್ ತಿಳಿಸಿದ್ದಾರೆ.
ತಮಿಳುನಾಡಿನಿಂದ ಬಸ್ನಲ್ಲಿ ಬರುತ್ತಿದ್ದ ಆರೋಪಿಗಳು, ರಾತ್ರಿ ವೇಳೆ ರಸ್ತೆಗಳಲ್ಲಿ ಒಂಟಿಯಾಗಿ ನಿಲುಗಡೆ ಮಾಡಿದ್ದ ಬೈಕ್ಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದರು.
ಓರ್ವ ಬೈಕ್ ಹತ್ತಿರ ಬಂದು ಲಾಕ್ ಮುರಿದು ಇನ್ನೊಬ್ಬನಿಗೆ ನಿರ್ದೇಶನ ನೀಡುತ್ತಿದ್ದ. ಮತ್ತೊಬ್ಬ ಸ್ವಲ್ಪ ದೂರದಲ್ಲಿ ನಿಂತು ಸಿಗ್ನಲ್ ಕೊಡುತ್ತಿದ್ದ. ಇನ್ನೊಬ್ಬ ಇನ್ನೂ ಸ್ವಲ್ಪ ದೂರದಲ್ಲಿ ನಿಂತು ಯಾರಾದರೂ ಬರುತ್ತಿದ್ದಾರೆಯೇ ಎನ್ನುವುದನ್ನು ಗಮನಿಸಿ ಸನ್ನೆ ಮಾಡುತ್ತಿದ್ದ. ಬಳಿಕ ಬೈಕ್ ಕದ್ದು, ಅದೇ ಬೈಕ್ನಲ್ಲಿ ರಾತ್ರೊರಾತ್ರಿ ತಮಿಳುನಾಡಿಗೆ ಪರಾರಿಯಾಗುತ್ತಿದ್ದರು.
ಕದ್ದ ಬೈಕ್ ಅನ್ನು ತಮಿಳುನಾಡಿನಲ್ಲಿ 10 ರಿಂದ 15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇದೇ ರೀತಿ ಬೈಕ್ ಕದ್ದು ತಮಿಳುನಾಡಿತ್ತ ಆರೋಪಿಗಳು ವೇಗವಾಗಿ ಹೋಗುತ್ತಿದ್ದಾಗ, ಗಸ್ತು ಪೊಲೀಸರನ್ನು ನೋಡಿ ಹೆದರಿ ಬೈಕ್ ಯೂಟರ್ನ್ ತೆಗೆದುಕೊಂಡಿದ್ದಾರೆ.
ಅನುಮಾನಗೊಂಡು ಅವರನ್ನು ಹಿಂಬಾಲಿಸಿ ಹಿಡಿದು ವಿಚಾರಣೆ ಮಾಡಿದಾಗ ಖದೀಮರ ಕೈಚಳಕ ಬಯಲಿಗೆ ಬಂದಿದ್ದು ಕಳವು ಮಾಡಿದ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಡಿಸಿಪಿ ಸಿಕೆಬಾಬಾ ಅವರ ನೇತೃತ್ವದ ಬೊಮ್ಮನಹಳ್ಳಿ ಪೊಲೀಸರು ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.