ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಿ 136ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ. ಆಂತರಿಕ ಸಮೀಕ್ಷೆ ಕಾಂಗ್ರೆಸ್ ಬಹುಮತ ಗಳಿಸಲಿದೆ ಎಂದು ತಿಳಿಸಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ಪ್ರಮುಖ ಸಮುದಾಯಕ್ಕೆ ಸೇರಿದವರು ಮುಖ್ಯಮಂತ್ರಿಯಾಗಿದ್ದಾರೆ ದಲಿತರು ಮುಖ್ಯಮಂತ್ರಿಯಾದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಅರಸು, ವೀರಪ್ಪ ಮೊಯ್ಲಿ, ಗುಂಡೂರಾವ್, ಬಂಗಾರಪ್ಪ, ಸಿದ್ದರಾಮಯ್ಯ ಸಿ.ಎಂ ಆಗಿದ್ದಾರೆ. ದಲಿತ ಸಿ.ಎಂ ಯಾಕಾಗಬಾರದು ಎಂದರು.
ರಾಜಕೀಯ ಜೀವನದಲ್ಲಿ ಮಹತ್ವದ ಹಂತಕ್ಕೆ ಬಂದು ತಲುಪಿದ್ದೇನೆ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದು ನನ್ನ ಕೈ ಬಲಪಡಿಸಬೇಕೆಂದು ಒಕ್ಕಲಿಗ ಸಮುದಾಯವನ್ನು ಕೇಳಿದ್ದೇನೆ. ಸಮುದಾಯ ನನ್ನ ಜೊತೆಗೆ ನಿಲ್ಲಲಿದೆ. ಜಾತ್ಯತೀತ ತತ್ವದಲ್ಲಿ ನಂಬಿಕೆಯಿಟ್ಟವನು ಎಲ್ಲ ಸಮುದಾಯಗಳೂ ಬೆಂಬಲಿಸುವ ವಿಶ್ವಾಸವಿದೆ’ ಎಂದು ಹೇಳಿದರು.
ಹಿಜಾಬ್, ಹಲಾಲ್ ವಿವಾದದಲ್ಲಿ ನಿಲುವು ಸ್ಪಷ್ಟಪಡಿಸದ್ದರಿಂದ ಅಲ್ಪಸಂಖ್ಯಾತ ಸಮುದಾಯ ದೂರವಾಗಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಭ್ರಷ್ಟಾಚಾರದಲ್ಲಿ ನಿರತವಾಗಿದ್ದ ಬಿಜೆಪಿ ಸರ್ಕಾರ ಹುಟ್ಟುಹಾಕಿದ ವಿವಾದಗಳು ಶಾಂತಿ ಕದಡುತ್ತಿದ್ದವು. ಹೈಕಮಾಂಡ್ ಸೂಚಿಸಿದಂತೆ ನಾನು ಮಾತನಾಡಿಲ್ಲ. ಅವುಗಳ ಕುರಿತು ನಮ್ಮ ಹಲವು ನಾಯಕರು ಮಾತನಾಡಿದ್ದಾರೆ’ ಎಂದರು.
‘ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟವನ್ನು ಬಿಜೆಪಿ ಹಾಳು ಮಾಡುತ್ತಿದೆ. ಜನರಿಗೆ ಬಸವಣ್ಣ, ಶಿಶುನಾಳ ಷರೀಫ, ಕನಕದಾಸರ ಕರ್ನಾಟಕ ಬೇಕು. ಆದರೆ, ಬಿಜೆಪಿ ಕೋಮು ದ್ವೇಷ ಹರಡಿ ಶಾಂತಿ ಕದಡುತ್ತಿದೆ. ಜನರು ತಕ್ಕ ಪಾಠವನ್ನು ಕಲಿಸಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮನುಷ್ಯನ ಬದುಕಿನಲ್ಲಿ ಹಲವು ಮೈಲುಗಲ್ಲುಗಳಿರುತ್ತವೆ. ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಸಿದ್ದರಾಮೋತ್ಸವ ಆಚರಿಸುತ್ತಿದ್ದಾರೆ. ಪುಸ್ತಕ ಬಿಡುಗಡೆ ಮಾಡುತ್ತಿದ್ದಾರೆ. ಜನ್ಮದಿನದ ಸಂದರ್ಭದಲ್ಲಿ ನಡೆದು ಬಂದ ದಾರಿಯನ್ನು ಮೆಲುಕು ಹಾಕಬಾರದು ಎಂದರೆ ಹೇಗೆ?. ನಾನು ಮತ್ತು ರಾಹುಲ್ ಗಾಂಧಿ ಇಬ್ಬರೂ ಉತ್ಸವದಲ್ಲಿ ಭಾಗವಹಿಸುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ. ನಮ್ಮದು ಕಾಂಗ್ರೆಸ್ ಬಣ’ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಬಿಜೆಪಿ ಸರ್ಕಾರವು ದಪ್ಪ ಚರ್ಮದ ಅತಿ ಭ್ರಷ್ಟ ಸರ್ಕಾರ. ನಿತ್ಯ ನಡೆಯುತ್ತಿರುವ ಹಗರಣಗಳು, ಭ್ರಷ್ಟಾಚಾರಕ್ಕೆ ಜನರು ಬೇಸತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರವು ಚುನಾವಣಾ ಪ್ರಣಾಳಿಕೆಯ ಬಹುತೇಕ ಎಲ್ಲ ಅಂಶಗಳನ್ನು ಈಡೇರಿಸಿತ್ತು. ಬಿಜೆಪಿಯು ತನ್ನ ಪ್ರಣಾಳಿಕೆಯ ಶೇ 40ರಷ್ಟು ನೆರವೇರಿಸಿದೆಯೇ? ಕಾಂಗ್ರೆಸ್ ಅಧಿಕಾರಕ್ಕೆ ಬಂದೊಡನೆ ಬಿಜೆಪಿಯ ಎಲ್ಲ ಹಗರಣಗಳ ತನಿಖೆ ನಡೆಸಲಿದೆ’ ಎಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಹಗರಣಗಳ ತನಿಖೆ..
Previous Articleಮಳೆಯಿಂದ ನೂರಾರು ಎಕರೆ ಬೆಳೆ ಹಾನಿ
Next Article ಕಳ್ಳರ ತಾಣ ಆಯ್ತು.. ತುಮಕೂರು ಬಸ್ ನಿಲ್ದಾಣ..!!