ಮಂಗಳೂರು: 2023 ರ ಚುನಾವಣೆಯನ್ನು ಯಡಿಯೂರಪ್ಪನವರ ಮಾರ್ಗದರ್ಶನ, ಬೊಮ್ಮಾಯಿಯವರ ನೇತ್ರತ್ವದಲ್ಲೇ ಎದುರಿಸುತ್ತೇವೆ. ಯಾವುದೇ ಕಾರಣಕ್ಕೂ ಬೊಮ್ಮಾಯಿಯವರ ಬದಲಾವಣೆ ಇಲ್ಲ. ಅವಧಿ ಪೂರ್ಣ ಆಗುವವರೆಗೆ ಬೊಮ್ಮಾಯಿಯವರೆ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕಾಂಗ್ರೆಸ್ ಟ್ವೀಟ್ ವಿಚಾರವಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಈ ಸರ್ಕಾರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಕಾಂಗ್ರೆಸ್ ಇಂತಹ ಹುನ್ನಾರವನ್ನು ಸೃಷ್ಟಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಕುತಂತ್ರಕ್ಕೆ ಇಳಿದಿದೆ. ಕಾಂಗ್ರೆಸ್ ನಲ್ಲಿ ಆಂತರಿಕ ಜಗಳ ಜಾಸ್ತಿಯಾಗಿದೆ. ಕೋಳಿವಾಡರಂತಹ ಹಿರಿಯರೇ ಸಿದ್ದರಾಮಯ್ಯ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಮುಖ್ಯಮಂತ್ರಿ ಆಗಬೇಕೆಂಬ ಜಗಳ ಅವರಲ್ಲಿದೆ. ಆಂತರಿಕ ಜಗಳ ಮುಚ್ಚಿಡಲು ಕಾಂಗ್ರೆಸ್ ಈ ತಂತ್ರಗಾರಿಕೆ ಮಾಡಿದೆ. ಜನರ ಹಾದಿಯನ್ನು ತಪ್ಪಿಸಲು ಕಾಂಗ್ರೆಸ್ ಇಂತಹ ಸುಳ್ಳು ಟ್ವೀಟ್ ಮಾಡಿದೆ ಎಂದಿದ್ದಾರೆ.
ಇನ್ನು, ಕಾಂಗ್ರೆಸ್ ನ ಯಾವ ನಾಟಕವೂ ನಡಿಯಲ್ಲ. ಕಾಂಗ್ರೆಸ್ ನ ಆಂತರಿಕ ಜಗಳ ಇನ್ನು ಒಂದು ತಿಂಗಳಲ್ಲಿ ಹೊರಬರುತ್ತೆ. ಮುಂದೆ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಯಾರಾದರೊಬ್ಬರು ಕಾಂಗ್ರೆಸ್ ನಿಂದ ಹೊರಬರಬಹುದು. ಸಿದ್ದರಾಮೋತ್ಸವ ನೋಡಿ ಡಿಕೆಶಿ ಮತ್ತು ಖರ್ಗೆ ಕಂಗಲಾಗಿದ್ದಾರೆ. ಇಂತಹ ಉತ್ಸವಗಳಿಂದ ಯಾವುದೇ ರಾಜಕೀಯ ಪರಿವರ್ತನೆ ಮಾಡಲು ಸಾಧ್ಯವಿಲ್ಲ. ಹಣ ಕೊಟ್ಟು ಜನರನ್ನು ತಂದಿದ್ದಾರೆ. ಈ ರೀತಿ ಜನ ಸೇರಿಸಿ ಜಾತ್ರೆ ಮಾಡುವುದಕ್ಕೆ ಕಾಂಗ್ರೆಸ್ ಗೆ ನಾಚಿಕೆಯಾಗಬೇಕು. ಪ್ರಸ್ತುತ ನಮ್ಮ ಸರ್ಕಾರವಿದೆ. ಮುಂದಿನ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.