ಬೆಂಗಳೂರು, ಜ.24- ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ ಸಾಮಾಜಿಕ, ಶೈಕ್ಷಣಿ ಹಾಗೂ ಆರ್ಥಿಕ ಸಮೀಕ್ಷಾ ವರದಿ ಸಿದ್ಧಗೊಳಿಸುವ ಕಾರ್ಯ ಅಂತಿಮ ಹಂತದಲ್ಲಿದ್ದು, ವರದಿಯನ್ನು ಜನವರಿ 31ರೊಳಗಾಗಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಕಾಲಕ್ಕೆ ಪೂರ್ಣ ಪ್ರಮಾಣದ ವರದಿಯನ್ನು ಸಲ್ಲಿಸಲಾಗುತ್ತದೆ. ಇಲ್ಲಿ ಮಧ್ಯಂತರ ವರದಿ ಎಂಬ ಗೊಂದಲಗಳಿಗೆ ಅವಕಾಶ ಇಲ್ಲ. ಜನವರಿ 31ಕ್ಕೆ ತಮ್ಮ ಅಧ್ಯಕ್ಷೀಯ ಅವ ಮುಗಿಯಲಿದೆ. ಅದರೊಳಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಇದು ಜಾತಿವಾರು ಜನಗಣತಿ ಅಲ್ಲ.ಕಾಂತರಾಜು ಅವರ ಅವಧಿಯಲ್ಲಿ ನಡೆದ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ,ಇದರ ವಿವರಗಳನ್ನು ಕ್ರೋಡೀಕರಿಸಿ ವರದಿ ಸಿದ್ದಪಡಿಸಲಾಗುತ್ತಿದೆ. ವರದಿಯಲ್ಲಿ ಅಂಶಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಸದ್ಯಕ್ಕೆ ವರದಿಯ ಪುಸ್ತಕ ಮುದ್ರಣಗೊಳ್ಳುತ್ತಿದೆ. ಅದು ಸಿದ್ಧವಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಯ ಕೇಳಲಾಗುವುದು. ಸಮಯ ಸಿಕ್ಕರೆ ಬಹುತೇಕ ಜನವರಿ 30ರ ಒಳಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಇದನ್ನು ಜಾತಿ ಜನಗಣತಿ ಎಂದಾಗಲಿ, ಕಾಂತರಾಜು ಅಥವಾ ಜಯಪ್ರಕಾಶ್ ಹೆಗ್ಡೆ ವರದಿ ಎಂದಾಗಲಿ ಭಾವಿಸಬೇಕಿಲ್ಲ. ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯಾಗಿರಲಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಬಳಿಕ ಅದನ್ನು ಸಂಪುಟದಲ್ಲಿ ಚರ್ಚಿಸಿ, ನಂತರ ವಿಧಾನ ಮಂಡಲ ಅವೇಶದಲ್ಲಿ ಮಂಡಿಸಬೇಕಾಗುತ್ತದೆ ಎಂದು ವಿವರಿಸಿದರು.