ದಕ್ಷಿಣ ಕನ್ನಡ, ಜು.28- ಸಂಘ ಪರಿವಾರ ಹಾಗು ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಇಬ್ಬರನ್ನು ಕೇರಳದಲ್ಲಿ ಬಂಧಿಸಿ ಏಳು ಮಂದಿ ಎಸ್‍ಡಿಪಿಐ ಕಾರ್ಯಕರ್ತರು ಸೇರಿದಂತೆ 21 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೊಹ್ಮದ್ ಶಫೀಕ್, ಝಾಕೀರ್ ಬಂಧಿತ ಆರೋಪಿಗಳಾಗಿದ್ದು ವಶಕ್ಕೆ ಪಡೆದವರ 21 ಕೋಮು ಅಹಿತಕರ ಘಟನೆಗಳು ನಡೆದಾಗ ಸಾಮಾನ್ಯವಾಗಿ ಹೆಸರು ಕೇಳಿಬರುವ ಎಸ್‍ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳಿಗೆ ಸೇರಿದವರು ಕೂಡ ಒಳಗೊಂಡಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಿಖೆಯ ನೇತ್ರತ್ವ ವಹಿಸಿರುವ ಐಡಿಜಿಪಿ ಅಲೋಕ್ ಕುಮಾರ್ ಪಶ್ಚಿಮ ವಲಯ ಐಜಿ ದೇಚಜ್ಯೋತಿ ರೇ, ಎಸ್ಪಿ ಋಷಿಕೇಶ್ ಸೋನಾವಣೆ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಸಭೆ ನಡೆಸುವ ಮುನ್ನ ಇಬ್ಬರು ಆರೋಪಿಗಳ ಬಂಧನದ ಮಾಹಿತಿ ನೀಡಿದರು.
ವಶಕ್ಕೆ ಪಡೆದುಕೊಂಡ 21ಮಂದಿಯಲ್ಲಿ ಎಸ್‌ಡಿಫಿಐ, ಪಿಎಫ್ಐ ಸೇರಿದಂತೆ ಹಲವು ಶಂಕಿತರು ಒಳಗೊಂಡಿದ್ದಾರೆ. ಇದು ತುಂಬಾ ಭೀಕರ ಹತ್ಯೆಯಾಗಿದ್ದು ಸೂಕ್ಷ್ಮ ವಿಚಾರವೂ ಆಗಿದೆ. ಈ ಪ್ರಕರಣದಲ್ಲಿ ಭಾಗಿಯಾದವರನ್ನ ಯಾರನ್ನ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಸಿಐಡಿಯ ಹಿರಿಯ ಎಸ್ ಪಿ ಅನುಚೇತ್, ಹಾಸನ ಎಸ್ಪಿ ಹರಿರಾಮ್ ಶಂಕರ್ ಅವರನ್ನು ಕರೆಸಿದ್ದು ಎಲ್ಲಾ ಅಯಾಮಗಳಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಬೆಳ್ಳಾರೆಯಲ್ಲಿ 144 ಸೆಕ್ಷನ್ (ನಿಷೇದಾಜ್ಞೆ) ಜಾರಿ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಯನ್ನು ನಾಳೆಗೆ ಮುಂದೂಡಲಾಗಿದೆ 144 ಸೆಕ್ಷನ್ ನಿಷೇಧಾಜ್ಞೆ ಇರುವುದರಿಂದ ಇಂದು ಹೋಗುವುದು ಬೇಡ, ನಾಳೆ ಹೋಗುವಂತೆ ಮನವಿ ಮಾಡಲಾಗಿದೆ ಅವರು ತಿಳಿಸಿದರು.
ಅಮಾಯಕರ ವಶ:
ಕೊಲೆ ಸಂಬಂಧ ಶಂಕೆಯ ಹಿನ್ನೆಲೆಯಲ್ಲಿ ಬೆಳ್ಳಾರೆ ಎಸ್‍ಡಿಪಿಐ ಕಾರ್ಯಕರ್ತರ ಮನೆಗೆ ನುಗ್ಗಿ ಏಳು ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಅವರೆಲ್ಲರೂ ಅಮಾಯಕ ಕಾರ್ಯಕರ್ತರಾಗಿದ್ದಾರೆ ಅವರಿಗೆ ಪೊಲೀಸರು ತೊಂದರೆ ನೀಡುತ್ತಿದ್ದಾರೆ ಎಂದು ಎಸ್‍ಡಿಪಿಐ ಆರೋಪಿಸಿದೆ.
ಕೃತ್ಯದ ಪ್ರಮುಖ ಆರೋಪಿಯು ಬೆಳ್ಳಾರೆಯ ಬೂಡು ಪ್ರದೇಶದ ನಿವಾಸಿಯಾಗಿದ್ದು, ವಿಚಾರಣೆ ವೇಳೆ ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಪ್ರವೀಣ್ ಕೊಲೆಯು ಕೇರಳ ನಂಟು ಹೊಂದಿರುವ ಬಗ್ಗೆ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಇದೇ ವೇಳೆ ವಾರದ ಹಿಂದೆ ಬೆಳ್ಳಾರೆಯಲ್ಲಿ ನಡೆದ ಕೇರಳ ಯುವಕನ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆ ನಡೆಸಿದ ದುಷ್ಕರ್ಮಿಗಳು ಆಗಮಿಸಿದ್ದು ಕೇರಳ ನೋಂದಣಿಯ ದ್ವಿಚಕ್ರ ವಾಹನದಲ್ಲಿ ಎಂಬುದು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಆ ವಾಹನದ ನೋಂದಣಿಯನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಘಟನೆಯ ಹಿಂದೆ ಕೇರಳದ ಮತಾಂಧ ಸಂಘಟನೆಗಳ ಕೈವಾಡ ಇರುವ ಬಗ್ಗೆ ಪೊಲೀಸ್ ಇಲಾಖೆ ಶಂಕಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ತೀವ್ರಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ತನಿಖೆ ಮೇಲೆ ತೀವ್ರ ನಿಗಾ:
ಪ್ರತಿ ಒಂದು ಗಂಟೆಗೊಮ್ಮೆ ಪ್ರಕರಣದ ಹೆಚ್ಚುವರಿ ಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಗಳನ್ನು ಟ್ರಾಕ್ ಮಾಡುತ್ತಿರುವುದಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ
ಹತ್ಯೆ ಬಳಿಕ ಆರೋಪಿಗಳು ಕೇರಳಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಅವರನ್ನು ಸೆರೆಹಿಡಿಯುವ ವಿಚಾರವಾಗಿ ಕೇರಳ ಡಿಜಿ-ಐಜಿಪಿ ಜತೆಗೆ ಮಾತುಕತೆ ನಡೆದಿದೆ ಎಂಬ ವಿವರಣೆ ಪ್ರವೀಣ್ ಸೂದ್ ನೀಡಿದ್ದಾರೆ.
ಪ್ರಕರಣದ ಅಪ್ಡೇಟ್‌ಗಳನ್ನು ತ್ವರಿತವಾಗಿ ನೀಡುವಂತೆ ಸೂಚಿಸಿ, ಫೋನ್ ಮೂಲಕ ಅಧಿಕಾರಿಗಳಿಂದ ಆರಗ ಜ್ಞಾನೇಂದ್ರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಎನ್ಐಎಗೆ ಪತ್ನಿ ಒತ್ತಾಯ:
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಮೃತ ಪ್ರವೀಣ್ ಪತ್ನಿ ನೂತನಾ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನನ್ನ ಪತಿ ಯಾರಿಗೂ ಅನ್ಯಾಯ ಮಾಡಲಿಲ್ಲ, ಇಡೀ ಸಮಾಜಕ್ಕಾಗಿ ಅವರು ಬದುಕಿದ್ದರು. ನನ್ನ ಪತಿಯ ಕೊಲೆ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು. ಎನ್ಐಎ ತನಿಖೆಯಿಂದ ಮಾತ್ರ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಭದ್ರತೆ ಪರಿಶೀಲನೆ:
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 7ನೇ ಪಡೆ ಕಮಾಂಡೆಂಟ್ ಬಿಎಂ ಪ್ರಸಾದ್ ಅವರು ಮೀಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಬೆಳ್ಳಾರೆಯಲ್ಲಿ ಭದ್ರತೆ ಪರಿಶೀಲಿಸಿದ ಕಮಾಂಡೆಂಟ್ ಬಿಎಂ ಪ್ರಸಾದ್, ಕಟ್ಟೆಚ್ಚರದಲ್ಲಿ ಇರುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.