ತುಮಕೂರು: ಸಾಧು-ಸಂತರ ನಾಡು ತುಮಕೂರು ಜಿಲ್ಲೆಯ ಜನರಲ್ಲಿ ಈಗ ಉಗ್ರ ಆತಂಕ ಶುರುವಾಗಿದೆ. ಬಹುತೇಕ ಶಾಂತಿಗೆ ಹೆಸರಾಗಿದ್ದ ಈ ನೆಲದಲ್ಲಿ ಉಗ್ರ ಚಟುವಟಿಕೆ ಸುಳಿವು ಜನರ ನಿದ್ದೆಗೆಡಿಸಿದೆ. ಐಸಿಸ್ ಉಗ್ರರ ಜೊತೆ ನಂಟಿದೆ ಎಂಬ ಕಾರಣಕ್ಕೆ ಯುವಕನನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ. ಬಳಿಕ ಬಿಡುಗಡೆ ಮಾಡಿರೋದು ಆತಂಕಕ್ಕೆ ಕಾರಣವಾಗಿದೆ.
ತುಮಕೂರು ನಗರ ಬೆಳೆಯುತಿದ್ದಂತೆ ಆತಂಕವೂ ಶುರುವಾಗಿದೆ. ಬೇರೆ ಬೇರೆ ರಾಜ್ಯ, ದೇಶಗಳಿಂದ ಬಂದು ನೆಲೆಸಿ ಸಮಾಜಘಾತುಕ ಕೃತ್ಯ ನಡೆಸುವವರ ಸಂಖ್ಯೆ ಹೆಚ್ಚಾಗುತಿದೆ. ಐಸಿಸ್ ಉಗ್ರರರೊಂದಿಗೆ ನಂಟಿದೆ ಎಂಬ ಕಾರಣಕ್ಕೆ ಎನ್‌ಐಎ ತಂಡ ವಿದ್ಯಾರ್ಥಿಯನ್ನ ಬಂಧಿಸಿ ಬಿಡುಗಡೆ ಮಾಡಿದೆ.
ಮಹಾರಾಷ್ಟ್ರ ಮೂಲದ ತುಮಕೂರಿನ ಎಚ್‌ಎಮ್‌ಎಸ್ ಯುನಾನಿ ಕಾಲೇಜಿನ ವಿದ್ಯಾರ್ಥಿ ಸಾಜಿದ್ ಮಕ್ರಾನಿ ಬಂಧಿತ ಶಂಕಿತ ಉಗ್ರ. ಈತ ಸದಾಶಿವ ನಗರದ 9 ನೇ ತಿರುವಿನಲ್ಲಿರುವ ರಂಗಸ್ವಾಮಿ ಎನ್ನುವವರ ಮನೆಯಲ್ಲಿ ವಾಸವಾಗಿದ್ದ. ಒಟ್ಟು ನಾಲ್ಕು ಜನ ಸ್ನೇಹಿತರು ಜೊತೆಯಲ್ಲಿ ಇದ್ದರು. ಭಾನುವಾರ ಬೆಳಗಿನ ಜಾವ 4 ಗಂಟೆಗೆ ಬಂದ 20 ಜನಎನ್‌ಐಎ ತಂಡ ಸತತ 6 ಗಂಟೆಗಳ ಕಾಲ ವಿಚಾರಣೆ ಮಾಡಿದೆ. ಆತನ ಬಳಿಯಿದ್ದ ಲ್ಯಾಪ್ ಟಾಪ್, ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಸೀಜ್ ಮಾಡಿ ಅರೆಸ್ಟ್ ಮಾಡಿದ್ದರು. ಸತತ ವಿಚಾರಣೆ ಬಳಿಕ ಬಿಡುಗಡೆಗೊಳಿಸಿದ್ದಾರೆ ಎಂದು ವಿಚಾರಣೆಗೆ ಒಳಪಟ್ಟ ಶಂಕಿತ ವಿದ್ಯಾರ್ಥಿ ಸಾಜಿದ್ ಮಕ್ರಾನಿ ತಿಳಿಸಿದ್ದಾನೆ.
ಬಿಡುಗಡೆಗೊಂಡ ಸಾಜಿದ್ ಮಕ್ರಾನಿ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ. ಚಲನ ವಲನದ ಮೇಲೆ ಕಣ್ಣಿಟ್ಟಿದ್ದಾರೆ. 2016 ಜನವರಿ 22 ರಂದು ಮುಜಾಹಿದ್ ಎಂಬ ಭಯೋತ್ಪಾದಕನನ್ನು ಭಯೋತ್ಪಾದಕ ನಿಗ್ರಹ ದಳ ಬಂಧಿಸಿತ್ತು. ಈ ಭಯೋತ್ಪಾದಕ ತುಮಕೂರು ನಗರದ ಪೂರ್‌ಹೌಸ್ ಕಾಲೋನಿ ನಿವಾಸಿಯಾಗಿದ್ದ.
ತಂದೆ ತಾಯಿಗಳು ಸರ್ಕಾರಿ ಅಧಿಕಾರಿಗಳಾಗಿದ್ದರು. ಆದರೂ ಮುಜಾಹಿದ್ ಉಗ್ರ ಸಂಘಟನೆಯೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದ. ಹಾಗಾಗಿ ಆತನನ್ನು ಬಂಧಿಸಿದ್ದು ಇನ್ನೂ ಕಂಬಿ ಹಿಂದೆ ಇದ್ದಾನೆ. ಅದೇ ರೀತಿ ಎಸ್‌ಎಸ್‌ಐಟಿ ಕಾಲೇಜಿನಲ್ಲೂ ಪಾಕಿಸ್ತಾನ ಪರ ಘೋಷಣೆ ಕೂಗಿ ಇಬ್ಬರು ಬಂಧಿತರಾಗಿದ್ದರು. ಮನೆ ಬಾಡಿಗೆ ನೀಡಿದ ಮನೆ ಮಾಲೀಕ ರಂಗಸ್ವಾಮಿ 20 ಕ್ಕೂ ಹೆಚ್ಚು ಮಂದಿ ಬಂದು ಕರೆದುಕೊಂಡು ಹೋಗಿದ್ದಾರೆ ಹೇಳಿದ್ದಾರೆ.
ವಿದ್ಯಾರ್ಥಿಯನ್ನ ವಿಚಾರಣೆಗೆ ಕರೆದುಕೊಂಡು ಹೋದ ವಿಷಯ ತಿಳಿದ ಮಾಜಿ ಶಾಸಕ ಸೊಗಡು ಶಿವಣ್ಣ ಸ್ಥಳಕ್ಕೆ ಭೇಟಿ ನೀಡಿದ್ದರು. ವಿಚಾರಣೆಗೆ ಒಳಪಟ್ಟ ಮನೆಯ ಮಾಲೀಕರ ಬಳಿ ಮಾಹಿತಿ ಕಲೆ ಹಾಕಿದರು. ಈ ನಡುವೆ ಎಚ್‌ಎಂಎಸ್ ಸಂಸ್ಥೆಯ ಮಾಲೀಕ ಹಾಗು ಮಾಜಿ ಶಾಸಕ ರಫೀಕ್ ಅಹಮದ್ ಸಂಸ್ಥೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಂಕಿತ ಉಗ್ರ ಸಾಜಿದ್ ಮಕ್ರಾನಿಯನ್ನು ಎನ್‌ಐಎ ವಿಚಾರಣೆ ಮಾಡಿದೆ. ಇದರಿಂದಾಗಿ ತುಮಕೂರು ನಗರದಲ್ಲಿ ಹೊಸದೊಂದು ತಲ್ಲಣ ಶುರುವಾಗಿದೆ. ಗುರುತು ಪರಿಚಯ ಇಲ್ಲದವರಿಗೆ ಮನೆ ಬಾಡಿಗೆ ಕೊಡುವ ಮುನ್ನ ಯೋಚಿಸುವಂತಾಗಿದೆ.