ಬೆಂಗಳೂರು: ರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದ್ರೌಪದಿ ಮುರ್ಮು ಬೆಂಗಳೂರಿಗೆ ಆಗಮಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಬೆಂಬಲ ಕೋರಿದರು.
ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹಾಗು ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
ಸಂಜೆ ಪಂಚತಾರಾ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಸಭೆಗೆ ಆಗಮಿಸಿದ ಅವರಿಗೆ ಆದಿವಾಸಿ ಕಲಾತಂಡಗಳು ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತಿಸಿದವು.
ರಾಜ್ಯ ಬಿಜೆಪಿ ವತಿಯಿಂದ ಕೃಷ್ಣನ ವಿಗ್ರಹ ನೀಡಿ ರಾಜ್ಯದ ಸಂಪ್ರದಾಯದಂತೆ ಪೇಟ ತೊಡಿಸಿ ಮುರ್ಮು ಅವರನ್ನು ಗೌರವಿಸಲಾಯಿತು. ನಂತರ ಅವರನ್ನು ಅಭಿನಂದಿಸಿ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.
ರಾಜ್ಯ ಬಿಜೆಪಿ ಅಭಿನಂದನೆ ಸ್ವೀಕರಿಸಿದ ದ್ರೌಪದಿ ಮುರ್ಮು ಅವರು ಪಕ್ಷ ನೀಡಿದ ಜವಾಬ್ದಾರಿ ಸ್ಮರಿಸಿದರು. ಈಗ ನೀಡುತ್ತಿರುವ ಹೊಸ ಜವಾಬ್ದಾರಿಗೆ ಬೆಂಬಲ ನೀಡುವಂತೆ ರಾಜ್ಯದ ಸಂಸದರು, ಶಾಸಕರಿಗೆ ಮನವಿ ಮಾಡಿದರು.
ಬಳಿಕ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಮಂಡ್ಯ ಸಂಸದೆ ಸುಮಲತಾ ಅವರನ್ನೂ ಭೇಟಿಮಾಡಿ ಬೆಂಬಲ ಕೋರಿದರು.
ಪದ್ಮನಾಭನಗರದಲ್ಲಿರುವ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಬೆಂಬಲ ಸೂಚಿಸುವ ವಿಚಾರಕ್ಕೆ ದೇವೇಗೌಡರನ್ನು ಭೇಟಿಯಾದರು.
ದ್ರೌಪದಿ ಮುರ್ಮುಗೆ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಳಿನ್ ಕುಮಾರ್ ಕಟೀಲ್, ಕಿಶನ್ ರೆಡ್ಡಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಾಥ್ ನೀಡಿದರು. ಇದೇ ವೇಳೆ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ ಸಹ ಉಪಸ್ಥಿತರಿದ್ದರು. ದೇವೇಗೌಡರ ಭೇಟಿ ವೇಳೆ ಜೆಡಿಎಸ್ ಬೆಂಬಲ ಘೋಷಿಸಿತು.
ದೇವೇಗೌಡರನ್ನು ಭೇಟಿಯಾದ ಬಳಿಕ ದ್ರೌಪದಿ ಮುರ್ಮು ನೇರವಾಗಿ ದೆಹಲಿಗೆ ಪ್ರಯಾಣ ಬೆಳೆಸಿದರು.