ಬೆಂಗಳೂರು.
ವಿಧಾನಸಭೆ Electionಗೆ ದಿನಗಳು ಸಮೀಪಿಸುತ್ತಿರುವಂತೆ ರಾಜಕೀಯ ಪಕ್ಷಗಳ ನಡುವಿನ ಸಮರ ತೀವ್ರಗೊಂಡಿದೆ. ಇದೀಗ ಕಾಂಗ್ರೆಸ್ ನಿಯೋಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
‘ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪ್ರತಿ ಮತದಾರನಿಗೆ 6000 ರೂಪಾಯಿ ಲಂಚದ ಬಹಿರಂಗ ಆಮಿಷವನ್ನು ಒಡ್ಡಿ, ಆ ಮೂಲಕ ರಾಜ್ಯದ 5 ಕೋಟಿ ಮತದಾರರನ್ನು 30 ಸಾವಿರ ಕೋಟಿ ಲಂಚದ ಮೂಲಕ ಖರೀದಿ ಮಾಡಲು ಸಂಚು ನಡೆಸಿದೆ’ ಎಂದು ಆರೋಪಿಸಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಇತ್ತೀಚೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತದಾರನಿಗೆ ಆರು ಸಾವಿರ ರೂಪಾಯಿ ನೀಡುವ ಕುರಿತು ಮಾತನಾಡಿರುವ ವಿಡಿಯೋ ತುಣುಕನ್ನು ಪೊಲೀಸರಿಗೆ ಸಲ್ಲಿಸಿದೆ. ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘ನೆಲದ ಕಾನೂನಿನ ಪ್ರಕಾರ ಪೊಲೀಸರು ಬಿಜೆಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ತಲಾ 6 ಸಾವಿರ ದುಡ್ಡು ನೀಡಿ ಮತ ಕೊಂಡುಕೊಳ್ಳಲು ಬಿಜೆಪಿಯವರು ಹೊರಟಿದ್ದಾರೆ. ಇವತ್ತು ರಾಷ್ಟ್ರೀಯ ಮತದಾರರ ದಿನ. ಹಾಗಾಗಿ ಇವತ್ತು ದೂರು ನೀಡಿದ್ದೇವೆ. ಪೊಲೀಸರು ಬಿಜೆಪಿಯ ಅಕ್ರಮವನ್ನು ತಡೆಗಟ್ಟಬೇಕು’ ಎಂದು ಆಗ್ರಹಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಬಂದಿದೆ. ಅದರಿಂದ ತಪ್ಪಿಸಿಕೊಳ್ಳಲು ಬಿಜೆಪಿ ದೊಡ್ಡ ಸಂಚು ರೂಪಿಸಿದೆ’ ಎಂದು ಆಪಾದಿಸಿದರು.
‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ರಾಜ್ಯಾಧ್ಯಕ್ಷ ಕಟೀಲ್, ಸಿಎಂ ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಸೇರಿ ಈ ಸಂಚು ರೂಪಿಸಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುವ ಹುನ್ನಾರ ನಡೆಸಿದ್ದಾರೆ. ಸರ್ಕಾರಿ ಕಾಮಗಾರಿಗಳಲ್ಲಿ ಸಂಗ್ರಹಿಸಿರುವ ಶೇ. 40 ರಷ್ಟು ಕಮೀಷನ್ ನಲ್ಲಿ ಮತದಾರರಿಗೆ ಆಮಿಷವೊಡ್ಡಲು ಮುಂದಾಗಿದ್ದಾರೆ’ ಎಂದು ದೂರಿದರು.’ಅತ್ಯಂತ ಭ್ರಷ್ಟ ಸರ್ಕಾರ ಇದು, ಎಲ್ಲದರಲ್ಲೂ ದುಡ್ಡು ಹೊಡೆದಿದ್ದಾರೆ. ಎಲ್ಲ ಕಚೇರಿಯನ್ನೂ ದುರ್ಬಳಕೆ ಮಾಡಿಕೊಂಡಿದ್ದಾರೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಗಮನಿಸದೆ ಮತ್ತೆ ಅಧಿಕಾರ ಹಿಡಿಯಲು 30 ಸಾವಿರ ಕೋಟಿ ಹಣವನ್ನ ಈ ಚುನಾವಣೆಯಲ್ಲಿ ಬಿಜೆಪಿ ಖರ್ಚು ಮಾಡುತ್ತಿದೆ. 5 ಕೋಟಿ ಮತದಾರರಿಗೆ ದುಡ್ಡು ನೀಡಲು ಹೊರಟಿದೆ. ಇದನ್ನು ರಮೇಶ್ ಜಾರಕಿಹೊಳಿಯೇ ಹೇಳಿದ್ದಾರೆ. ಎಲ್ಲವನ್ನೂ ಪೊಲೀಸರ ಗಮನಕ್ಕೆ ತಂದಿದ್ದೇವೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಮುಕ್ತ ಹಾಗೂ ಸ್ವತಂತ್ರವಾಗಿ ಚುನಾವಣೆ ನಡೆಯಬೇಕು. ಆದರೆ ಈ ರೀತಿಯಲ್ಲಿ ಆಮಿಷ ಒಡ್ಡಿದ್ರೆ ಸ್ವತಂತ್ರವಾಗಿ ಚುನಾವಣೆ ನಡೆಯಲ್ಲ, ಪ್ರಜಾಪ್ರಭುತ್ವ ಉಳಿಯಲ್ಲ. ಸ್ವತಂತ್ರ ಚುನಾವಣೆ ಆಗಬೇಕು. ಆಮಿಷ ಒಡ್ಡುವುದು ಕಾನೂನು ಬಾಹಿರ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ಕೊಡ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದರು.