ಗದಗ: ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಹಾಗು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವು ಪೌರಕಾರ್ಮಿಕರ ಮತ್ತು ಗುರುತಿಸಲ್ಪಟ್ಟ ಮ್ಯಾನುವಲ್ ಸ್ಕ್ಯಾವೆಂಜರಗಳ ಹಿತರಕ್ಷಣೆಗಾಗಿ ಸದಾಸಿದ್ಧವಾಗಿದೆ ಎಂದು ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ ಹೇಳಿದರು.
ಅವರು ಗದಗನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಆಯೋಗವು ಪೌರಕಾರ್ಮಿಕರ ಆರ್ಥಿಕ ಜೀವನ ಸುಧಾರಣೆಗಾಗಿ ಇರುವ ಸೌಲಭ್ಯಗಳನ್ನು ದೊರಕಿಸಲು ಪ್ರಯತ್ನಿಸುತ್ತದೆ. ಸರ್ಕಾರದಿಂದ ಇರುವ ಸೌಲಭ್ಯಗಳ ವಿತರಣೆಯಲ್ಲಿ ಲೋಪವಾದರೆ ಸಂಬಂಧಿತ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ವಹಿಸಿ ಆಗಿರುವ ಲೋಪವನ್ನು ಸರಿಪಡಿಸಲಾಗುವದು.
ಈವರೆಗೆ 90ಜನ ಮ್ಯಾನುವಲ್ ಸ್ಕ್ಯಾವೆಂಜರುಗಳು ರಾಜ್ಯದಲ್ಲಿ ಮೃತರಾಗಿದ್ದಾರೆ. ಈ ಹಿಂದೆ ಜರುಗಿದ ಸಮೀಕ್ಷೆಯಲ್ಲಿ 5080ಇದ್ದ ಮ್ಯಾನುವಲ್ ಸ್ಕ್ಯಾವೆಂಜರಗಳ ಸಂಖ್ಯೆ ಈಗ ಸಮೀಕ್ಷೆ ಮಾಡಿದ್ದಲ್ಲಿ 10,000ಆಗಲಿದೆ ಎಂದರು. ಆಯೋಗಕ್ಕೆ ಬಂದಿರುವ ದೂರುಗಳು ಹಾಗೂ ಸ್ವಯಂ ದೂರು ದಾಖಲಿಸಲಾಗಿದ್ದು ಒಟ್ಟಾರೆ 350 ಪ್ರಕರಣಗಳು ವಿವಿಧ ಹಂತಗಳ ವಿಚಾರಣೆ ನಡೆಯುತ್ತಿದ್ದು ಈ ಪೈಕಿ 20-30ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಪೌರಕಾರ್ಮಿಕರಿಗೆ ಸಾಮಾಜಿಕ ಸಮಾನತೆ ನೀಡಲು ಆಯೋಗವು ಸಧಾ ಕಾರ್ಯಪ್ರವೃತ್ತವಾಗಿದೆ ಎಂದರು.
ಪ್ರಗತಿ ಪರಿಶೀಲನೆ ಸಭೆಯಲ್ಲಿ ಪೌರಕಾರ್ಮಿಕರಿಗೆ ಇರುವ ಕನಿಷ್ಠ ವೇತನ, ಸೌಲಭ್ಯಗಳು ಸೇರಿದಂತೆ ಉತ್ತಮ ರೀತಿಯ ಸುರಕ್ಷತಾ ಪರಿಕರಗಳನ್ನು ನೀಡುವ ಮೂಲಕ ಪೌರಕಾರ್ಮಿಕರ ಸೇವೆಯನ್ನು ಪಡೆಯುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಗದಗ-ಬೆಟಗೇರಿ ನಗರಸಭೆ ಹೊರತು ಪಡಿಸಿ ಜಿಲ್ಲೆಯ ಉಳಿದ ಸ್ಥಳೀಯ ಸಂಸ್ಥೆಗಳು ಸ್ವಲ್ಪ ಮಟ್ಟಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವಂತೆ ಹಾಗೂ ಈಗಾಗಿರುವ ಲೋಪಗಳ ಸರಿಪಡಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.