ಗದಗ: ಇಂದು ಕೋಮುಗಲಭೆಗಳು ಸಮಾಜದ ಸ್ವಾಸ್ಥ್ಯಕ್ಕೆ ಕೊಳ್ಳಿ ಇಡುತ್ತಿವೆ. ಆದರೆ ಗದಗದಲ್ಲಿ ಆಗಬಹುದಾದ ಅನಾಹುತವನ್ನು ತಡೆಗಟ್ಟೆ ಸರಿಸಮಯಕ್ಕೆ ಸೂಕ್ತ ಸ್ಪಂದನೆ ನೀಡುವ ಮೂಲಕ ಜಿಲ್ಲಾ ಪೊಲೀಸ್ ಜನರಿಂದ ಸೈ ಎನಿಸಿಕೊಂಡಿದೆ. ಹೌದು ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮಂಗಳವಾರ ಮೊಹರಂ ವೇಳೆ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಪತ್ರಿಕಾಗೋಷ್ಟಿ ನಡೆಸಿ, ಜನರಿಗೆ ಜಾಗೃತಿ ಮೂಡಿಸುವ ಮೂಲಕ ಅಶಾಂತಿ ನಿರ್ಮಿಸದಂತೆ ಮನವಿ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಜನರ ಮೇಲೆ ದೂರು ದಾಖಲಾಗಿದ್ದು, ಆ ಪೈಕಿ ಶ್ರೀರಾಮಸೇನೆ ಕಾರ್ಯಕರ್ತ ಸೋಮು ಗುಡಿ, ಯಲ್ಲಪ್ಪ ಮಲ್ಲಾಪುರ ಹಾಗೂ ಆತನ ಸ್ನೇಹಿತ ಸಲ್ಮಾನ್ ಬಡೇಖಾನ್ ಎಂಬುರವನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಾದ ರಾಮಕೃಷ್ಣ ಹಂಡಿ, ಶಿವು ಗದಗಿನ, ದಯಾನಂದ ಗುಡಿ ಬಂಧನಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದರು.
ಮೊಹರಂ ಮೆರವಣಿಗೆ ವೇಳೆ ಕಾಲು ತುಳಿದ ಕ್ಷುಲ್ಲಕ ವಿಷಯಕ್ಕೆ ಜಗಳವಾಗಿದೆ. ಆದರೆ ಚಾಕು ಇರಿಯುವ ಮಟ್ಟಿಗೆ ಗಂಭೀರವಾಗಲು ಏನು ಕಾರಣ ಎನ್ನುವುದು ತನಿಖೆಯಿಂದ ಗೊತ್ತಾಗಲಿದೆ. ಮೇಲ್ನೋಟಕ್ಕೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಅಂದಾಜಿಸಲಾಗಿದೆ. ಕೋಮು ದ್ವೇಷದ ಹಿನ್ನೆಲೆಯಲ್ಲಿ ನಡೆದ ಘಟನೆ ಇದಲ್ಲ ಎಂದು ಸ್ಪಷ್ಟಪಡಿಸಿದರು.
ಘಟನೆಯಲ್ಲಿ ಗಾಯಗೊಂಡ ತೌಸಿಫ್ ನಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತಿದೆ. ಮಂಗಳವಾರ ರಾತ್ರಿಯೇ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಜಿಮ್ಸ್ ತಜ್ಞ ವೈದ್ಯರು ನಿರಂತರ ನಿಗಾ ವಹಿಸುತ್ತಿದ್ದಾರೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಯಾರೊಬ್ಬರೂ ಘಟನೆ ಕುರಿತು ವದಂತಿ ಹಬ್ಬಿಸಬಾರದು ಎಂದು ಮನವಿ ಮಾಡಿಕೊಂಡರು.
ಚಾಕು ಇರಿತ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಯಾಗಿ ಜಿಲ್ಲಾ ಸಶಸ್ತ್ರ ಪಡೆಯ ಎರಡು ತುಕಡಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ ಎಂದರು.
ಮಲ್ಲಸಮುದ್ರ ಗ್ರಾಮದಲ್ಲಿ ನಡೆದ ಚಾಕು ಇರಿತ ಪ್ರಕರಣದ ನಂತರ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಸಂಬಂಧ 15ಜನರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ಘಟನೆ ನಂತರ ಗಾಯಾಳುಗಳ ಪರವಾಗಿ ಗುಂಪೊಂದು ಆರೋಪಿಗಳ ಮನೆಗೆ ನುಗ್ಗಲು ಯತ್ನಿಸಿದೆ. ಪೊಲೀಸರ ಮಾತಿಗೂ ಬೆಲೆ ಕೊಡದೆ ನುಗ್ಗಿದ 15ಜನರ ವಿರುದ್ಧ ವಿವಿಧ ಕಲಂ ಅಡಿ ಗದಗ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದರು.