ಬೆಂಗಳೂರು,ಜು.14-ಅಕ್ರಮವಾಗಿ ಪಿಸ್ತೂಲ್ ಮಾಡುತ್ತಿದ್ದ ಆರೋಪಿಗಳ ಬಂಧಿಸಿರುವ ಹೆಬ್ಬಾಳ ಪೊಲೀಸರು 1 ನಾಡ ಪಿಸ್ತೂಲ್ ಹಾಗು 6 ಜೀವಂತ ಗುಂಡುಗಳ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಾಲ ಮಂದಿರಕ್ಕೊಪ್ಪಿಸಲಾಗಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಹೆಬ್ಬಾಳದ ಪಿಳ್ಳೇಕಮ್ಮ ದೇವಸ್ಥಾನದ ರೈಲ್ವೆ ಹಳಿಯ ಹತ್ತಿರ ಪೊಲೀಸರು ಗಸ್ತು ತಿರುಗುವಾಗ ಅನುಮಾನಾಸ್ಪದವಾಗಿ ನಿಂತಿದ್ದ ಆರೋಪಿಗಳ ಪೈಕಿ ಒಬ್ಬನ ಕೈ ಚೀಲವನ್ನು ತಪಾಸಣೆ ನಡೆಸಲು ಹೋದಾಗ ಎಲ್ಲರೂ ಓಡಲು ಪ್ರಾರಂಭಿಸಿದ್ದು ಬೆನ್ನಟ್ಟಿ ಹಿಡಿದುಕೊಂಡು ಕೈ ಚೀಲವನ್ನು ಪರಿಶೀಲಿಸಲಾಗಿ ಒಂದು ಪಿಸ್ತೂಲ್ ಹಾಗು 6 ಜೀವಂತ ಗುಂಡುಗಳು ಇದ್ದು, ಪಿಸ್ತೂಲನ್ನು ತಮ್ಮ ವಶದಲ್ಲಿಟ್ಟುಕೊಂಡಿರುವುದು ಪತ್ತೆಯಾಗಿ ಎಲ್ಲರನ್ನೂ ಬಂಧಿಸಲಾಗಿದೆ.
ಆರೋಪಿಗಳು ಬಿಹಾರ ಮೂಲದವರಾಗಿದ್ದು, ಕೆಲಸ ಹುಡುಕಿಕೊಂಡು ನಗರಕ್ಕೆ ಬರುವಾಗ ತಮ್ಮ ಊರಿನಿಂದ ನಾಡ ಪಿಸ್ತೂಲ್ ಹಾಗೂ ಗುಂಡುಗಳನ್ನು ಜೊತೆಯಲ್ಲಿ ತಂದಿದ್ದು ನಗರದಲ್ಲಿ ಯಾರಿಗಾದರೂ ಮಾರಾಟ ಮಾಡಿ ಸುಲಭವಾಗಿ ಹಣಗಳಿಸಲು ಮುಂದಾಗಿರುವುದನ್ನು ಬಾಯ್ಬಿಟ್ಟಿದ್ದಾರೆ ಎಂದರು.
ಹೆಬ್ಬಾಳ ಪೊಲೀಸ್ ಇನ್ಸ್‌ಪೆಕ್ಟರ್ ದಿಲೀಪ್ ಕುಮಾರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ