ಬೆಂಗಳೂರು: ರೈತರ ಬದುಕು ನಾಶ ಮಾಡಲು ಕರಾಳ ಕೃಷಿ ಕಾಯ್ದೆಗಳನ್ನು ತಂದಿದ್ದ ಕೇಂದ್ರ ಸರ್ಕಾರ ಇದೀಗ ಅಗ್ನಿಪಥ್ ಮೂಲಕ ಯುವಜನರ ಬದುಕು ನಾಶ ಮಾಡಲು ಹೊರಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಪಾದಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ಇಂತಹ ಅವೈಜ್ಞಾನಿಕ ಯೋಜನೆಗಳ ಮೂಲಕ ಜನರ ಬದುಕಿನ ಜೊತೆ ಆಟವಾಡುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದ್ದಾರೆ. ದೇಶದ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳುವ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಬಲ್ಲ ಅಗ್ನಿಪಥ್ ಎಂಬ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ತಕ್ಷಣ ರದ್ದುಪಡಿಸಿ ಈಗಿನ ಸೇನಾ ನೇಮಕಾತಿ ಯೋಜನೆಯಡಿಯಲ್ಲಿಯೇ ಸೈನಿಕರ ನೇಮಕಾತಿ ನಡೆಸಬೇಕು. ರೈತರನ್ನು ಬಲಿಕೊಟ್ಟಾಯಿತು. ಈಗ ಸೈನಿಕರ ಸರದಿಯೇ?’ ಎಂದು ಪ್ರಶ್ನಿಸಿದ್ದಾರೆ.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರೇ, ಉದ್ಯೋಗಾವಕಾಶದ ಬಾಗಿಲುಗಳನ್ನು ಒಂದೊಂದಾಗಿ ಮುಚ್ಚುತ್ತಾ ಇರುವ ನಿಮಗೆ ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗಳನ್ನು ಸೃಷ್ಟಿಸುವ ಗುಪ್ತಾ ಅಜೆಂಡಾ ಏನಾದರೂ ಇದೆಯೇ? ಎಂದು ಕೇಳಿದ್ದಾರೆ.
ಉದ್ಯೋಗದ ಅಭದ್ರತೆ, ಭವಿಷ್ಯದ ಬಗೆಗಿನ ಭಯ ಮತ್ತು ವೃತ್ತಿ ಬಗೆಗಿನ ಅತೃಪ್ತಿಯನ್ನು ಹುಟ್ಟುಹಾಕಲಿರುವ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಸೈನಿಕರು ತಮ್ಮ ವೃತ್ತಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಲು ಸಾಧ್ಯವೇ? ಶತ್ರುಗಳ ಜೊತೆ ಕಾದಾಡಲಿರುವ ಸೈನಿಕರ ಈ ಮನಸ್ಥಿತಿ ಅಪಾಯಕಾರಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.
Previous Articleಕುಂಟ ಕಳ್ಳನ ಬಂಧನ!
Next Article ತೆರೆಗೆ ಬರಲಿದೆ ಕಾಫಿ ಡೇ ಸಿದ್ದಾರ್ಥ್ ಬಯೋಪಿಕ್!